Top Newsರಾಜಕೀಯರಾಜ್ಯಸುದ್ದಿ

ಶಾಸಕ ಎಸ್. ಎನ್.ಸುಬ್ಬಾರೆಡ್ಡಿಗೆ ಕಾನೂನಿನ ಸಂಕಷ್ಟ..!

ಬಿಜೆಪಿಯ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಅವರು ತಮ್ಮ ವಿರುದ್ಧ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಬೇಕೆಂದು ಕೋರಿ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ಸುಬ್ಬಾರೆಡ್ಡಿಗೆ ಕಾನೂನು ಹೋರಾಟದಲ್ಲಿ ಮತ್ತೆ ಹಿನ್ನಡೆಯಾಗಿದೆ. ಈ ಹಿಂದೆಯೂ ಅವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಚುನಾವಣಾ ತಕರಾರು ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ. ಅದನ್ನು ವಜಾಗೊಳಿಸಬೇಕೆಂದು ಕೋರಿ ಸುಬ್ಬಾರೆಡ್ಡಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಆಲಿಸಿ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ನೇತೃತ್ವದ ಏಕಸದಸ್ಯಪೀಠ ಈ ಆದೇಶ ನೀಡಿದೆ. ವಾದ ಮತ್ತು ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಅರ್ಜಿಯ ಕುರಿತು ಈಗಾಗಲೇ ಸಾಕಷ್ಟು ವಿಚಾರಣೆ ನಡೆದಿದೆ ಮತ್ತು ಸಾಕ್ಷಿಗಳ ವಿಚಾರಣೆ ಹಂತಕ್ಕೆ ಬಂದಿದೆ. ಹಾಗಾಗಿ ಈ ಹಂತದಲ್ಲಿ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ಆದೇಶಿಸಿದೆ. ಅಲ್ಲದೆ, ಡಿ.11ಕ್ಕೆ ವಿಚಾರಣೆಯನ್ನು ಮುಂದೂಡಿರುವ ನ್ಯಾಯಾಲಯ, ಆ ದಿನದಿಂದ ಸಾಕ್ಷಿಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಆದೇಶಿಸಿದೆ. ಹಾಗಾಗಿ ಸುಬ್ಬಾರೆಡ್ಡಿ ಅವರು ಇದೀಗ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಎದುರಿಸಲೇಬೇಕಾಗಿದೆ.

ಏನಿದು ಪ್ರಕರಣದ ಹಿನ್ನಲೆ.?

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಎಸ್.ಎನ್.ಸುಬ್ಬಾರೆಡ್ಡಿ ಚುನಾಯಿತ ರಾಗಿದ್ದರು. ಚುನಾವಣೆಯಲ್ಲಿ ಎಸ್.ಎನ್. ಸುಬ್ಬಾರೆಡ್ಡಿ ಸಲ್ಲಿಸಿದ್ದ ನಾಮಪತ್ರ ದೋಷದಿಂದ ಕೂಡಿದೆ. ತಮ್ಮ ಆಸ್ತಿ ವಿವರಗಳನ್ನು ಮುಚ್ಚಿಟ್ಟು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಜತೆಗೆ ಆಸ್ತಿಗಳ ತೆರಿಗೆ ಪಾವತಿ ಬಾಕಿ ಮಾಹಿತಿಯನ್ನು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿಲ್ಲ. ಹಾಗಾಗಿ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕೆಂದು ಪಕ್ಷದ ಪರಾಜಿತ ಅಭ್ಯರ್ಥಿ ಸಿ.ಮುನಿರಾಜು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಲು ಎಸ್. ಎನ್.ಸುಬ್ಬಾರೆಡ್ಡಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

 

Comments (0)

Your email address will not be published. Required fields are marked *

Back to top button