
ಸಿದ್ಧರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ & ಜೆಡಿಎಸ್ ಮೈತ್ರಿ ಪಕ್ಷಗಳು ಮೈಸೂರು ಪಾದಯಾತ್ರೆಯನ್ನು ಆರಂಭಿಸಿವೆ. ಈ ಪಾದಯಾತ್ರೆಯಲ್ಲಿ ಭಾರತೀಯ ಜನತಾಪಕ್ಷದ ರಾಜ್ಯಾಧ್ಯಕ್ಷ ವಿ.ವೈ. ವಿಜಯೇಂದ್ರ ಹಾಗೂ ನಿಖಿಲ್ ಕುಮಾರಸ್ವಾಮಿ ಸಾರಥ್ಯ ವಹಿಸಿ ಪಾದಯಾತ್ರೆಯಲ್ಲಿ ಮಿಂಚಿದ್ದು, ಹೊಸ ಜೋಡೆತ್ತುಗಳ ಉದಯವಾಗಿದೆ. ಈ ಜೋಡೆತ್ತುಗಳ ಉದಯ ರಾಜಕೀಯ ವಲಯದಲ್ಲಿ ಭರವಸೆಯ ಬೆಳಕು ಮೂಡಿಸಿದೆ. ಮುಂದಿನ ಎಲ್ಲಾ ಹೋರಾಟಕ್ಕೂ ಈ ಜೋಡಿಯ ಜುಗಲ್ ಬಂಧಿ ಸಜ್ಜಾಗಿದೆ. ಮೈತ್ರಿ ಪಕ್ಷದಲ್ಲಿ ಈ 2ನೇ ಹಂತದ ಯುವ ನಾಯಕತ್ವಕ್ಕೆ ಪಕ್ಷದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಇವರುಗಳು ಭರವಸೆಯ ನಾಯಕರುಗಳಾಗಿದ್ದಾರೆ. ದಾರಿಯುದ್ದಕ್ಕೂ ಮಹಿಳೆಯರು ಸಾಲುಗಟ್ಟಿ ನಿಂತು ಆರತಿಯೆತ್ತಿ ಇವರುಗಳನ್ನು ಸ್ವಾಗತಿಸುತ್ತಿದ್ದಾರೆ. ಒಟ್ಟಾರೆ ಈ ಯುವಜೋಡಿಗಳು ಪಾದಯಾತ್ರೆಯ ಉದ್ದಗಲಕ್ಕೂ ಮಿಂಚುತ್ತಿದ್ದು ಇವರುಗಳಿಗೆ ಈ ಪಾದಯಾತ್ರೆಯೇ ಶಕ್ತಿ ಪ್ರದರ್ಶನದ ವೇದಿಕೆಯಾಗಿದ್ದು ಮುಂದೆ ಏನಾಗುವುದೆಂದು ಕಾದು ನೋಡಬೇಕಾಗಿದೆ.




