ಬೆಂಗಳೂರು : ಕನ್ನಡದ ನಟ ಚೇತನ್​ ಚಂದ್ರ ಮೇಲೆ ಭಾನುವಾರ (ಮೇ 12) ಬೆಂಗಳೂರಿನ ಕಗ್ಗಲಿಪುರ ಸಮೀಪ ಹಲ್ಲೆ ನಡೆದಿತ್ತು. ನಟನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಆರೋಪದ ಮೇಲೆ ಕಿರಣ್ ಮತ್ತು ಹರೀಶ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕಗ್ಗಲಿಪುರ ಪೊಲೀಸ್​ ಠಾಣೆಯಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಹಲ್ಲೆಗೆ ಒಳಗಾಗಿರುವ ಚೇತನ್​ ಚಂದ್ರ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು, ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಚೇತನ್​ ಚಂದ್ರ ವಿರುದ್ಧ ಪ್ರತಿದೂರು ಕೂಡ ದಾಖಲಾಗಿದೆ.

ಹಲ್ಲೆ ಆರೋಪ ಹೊತ್ತಿರುವ ಕಿರಣ್​ ಅವರ ಪತ್ನಿ ಐಶ್ವರ್ಯಾ ಅವರು ಚೇತನ್​ ವಿರುದ್ಧ ಪ್ರತಿದೂರು ನೀಡಿದ್ದಾರೆ. ನಟನಿಂದ ತಮಗೆ ಹಾಗೂ ತಮ್ಮ ಪತಿ ಕಿರಣ್​ ಮೇಲೆ ಹಲ್ಲೆ ಆಗಿದೆ ಎಂದು ಐಶ್ವರ್ಯಾ ದೂರಿನಲ್ಲಿ ತಿಳಿಸಿದ್ದಾರೆ. ಹಾಗಾಗಿ ಎಫ್​ಐಆರ್​ ದಾಖಲು ಮಾಡಲಾಗಿದೆ. ಕಗ್ಗಲಿಪುರ ಠಾಣೆಯಲ್ಲಿ ಐಶ್ವರ್ಯಾ ದೂರು ನೀಡಿದ್ದು, ಚೇತನ್ ಚಂದ್ರ ಹಾಗೂ ಇನ್ನಿಬ್ಬರ ವಿರುದ್ಧ ಐಪಿಸಿ ಸೆಕ್ಷನ್​ 323, 354, 34ರಡಿಯಲ್ಲಿ ಎಫ್​ಐಆರ್​ ದಾಖಲಿಸಲಾಗಿದೆ.

‘ನಿನ್ನೆ ರಾತ್ರಿ ಬೈಕ್​ನಲ್ಲಿ ಬರಬೇಕಾದರೆ ಸೈಡ್ ತೆಗದುಕೊಂಡಿದ್ದಕ್ಕೆ ಚೇತನ್​ಗೆ ಕೋಪ ಬಂದಿದೆ. ನನ್ನ ಗಂಡನಿಗೆ ಚೇತನ್ ಮಧ್ಯದ ಬೆರಳು ತೋರಿಸಿದ್ದಾರೆ. ನಂತರ ನನ್ನ ಗಂಡ ಬೇಕರಿ ಹತ್ತಿರ ಬೈಕ್ ನಿಲ್ಲಿಸಿದಾಗ ಚೇತನ್ ಬಂದು ಡಿಚ್ಚಿ ಹೊಡೆದಿದ್ದಾರೆ. ಆ ವೇಳೆ ನಾನು ಬೇಕರಿ ಬಳಿ ಇದ್ದೆ. ನಾನು ಹೋಗಿ ಕ್ಷಮೆ ಕೇಳಿದರೂ, ನನಗೂ ಚೇತನ್ ಹೊಡೆದಿದ್ದಾರೆ. ನನಗೆ ಹೊಡೆದಾಗ ಜನರು ಚೇತನ್​ಗೆ ಹೊಡೆದಿದ್ದಾರೆ’ ಎಂದು ಐಶ್ವರ್ಯಾ ಹೇಳಿಕೆ ನೀಡಿದ್ದಾರೆ.

ಭಾನುವಾರ (ಮೇ 12) ಸಂಜೆ ಚೇತನ್​ ಚಂದ್ರ ಅವರ ಮೇಲೆ ಸುಮಾರು 20 ಜನರು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆದ ಬಳಿಕ ಅವರು ಕಗ್ಗಲಿಪುರ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದರು. ಪ್ರಥಮ ಚಿಕಿತ್ಸೆ ಪಡೆಯಲು ಹತ್ತಿರದ ಆಸ್ಪತ್ರೆಗೆ ಬಂದು ಚೇತನ್​ ಚಂದ್ರ ಇನ್​ಸ್ಟಾಗ್ರಾಮ್​ ಲೈವ್​ನಲ್ಲಿ ಹಲ್ಲೆ ಬಗ್ಗೆ ವಿವರ ನೀಡಿದರು. ‘ಇದೊಂದು ದುರ್ಘಟನೆ. ನನಗೆ ನ್ಯಾಯ ಬೇಕು’ ಎಂದು ಅವರು ಮನವಿ ಮಾಡಿಕೊಂಡಿದ್ದರು. ಹಲವು ವರ್ಷಗಳಿಂದ ಚೇತನ್​ ಚಂದ್ರ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

By Veeresh

Leave a Reply

Your email address will not be published. Required fields are marked *

Verified by MonsterInsights