ಹಣಕಾಸು

ಡೆಬಿಟ್ ಕಾರ್ಡ್ ಕಳೆದು ಹೋದ್ರೆ ಏನ್ಮಾಡ್ಬೇಕು ಗೊತ್ತಾ?

ಡೆಬಿಟ್ ಕಾರ್ಡ್​ಗಳು ಜನ ಸಾಮಾನ್ಯರ ವ್ಯವಹಾರವನ್ನು ಸುಲಭವಾಗಿಸಿದೆ. ನಗದು ವಿತ್ಡ್ರಾ ಮಾಡುವುದು ಮಾತ್ರವಲ್ಲ ಕಾರ್ಡ್ ಸ್ವೈಪ್ ಮಾಡಿ ಖರೀದಿಯನ್ನೂ ಮಾಡಬಹುದು. ಹೀಗಾಗಿ ನಗದು ರಹಿತ ವ್ಯವಹಾರಗಳಿಗಾಗಿ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಅನಧಿಕೃತ ವಹಿವಾಟುಗಳಿಂದ ರಕ್ಷಿಸಲು ಪಿನ್ ಆಧಾರಿತ ದೃಢೀಕರಣವನ್ನು ಒದಗಿಸಲಾಗಿದೆ.

ಆದಾಗ್ಯೂ ಕೆಲವೊಮ್ಮೆ ಡೆಬಿಟ್ ಕಾರ್ಡ್ ಕಳೆದುಹೋಗುವ ಅಥವಾ ಕಳವಾದಾಗ ದುರುಪಯೋಗವಾಗುವ ಸಾಧ್ಯತೆ ಇದೆ. ನಿಮ್ಮ ಡೆಬಿಟ್ ಕಾರ್ಡ್ ವಂಚಕರ ಕೈಗೆ ಸಿಕ್ಕರೆ ಅಪಾಯ. ಹೀಗಾದಾಗ ನಿಮ್ಮ ಅಕೌಂಟ್ನ ಹಣ ಖಾಲಿ ಆದಂತೆಯೇ ಲೆಕ್ಕ. ಹಾಗಂತ ನಿಮ್ಮ ಡೆಬಿಟ್ ಕಾರ್ಡ್ ಕಳೆದು ಹೋದರೆ ಚಿಂತೆ ಬೇಡ. ತ್ವರಿತವಾಗಿ ಕಾರ್ಯ ಪ್ರವೃತ್ತರಾಗುವ ಮೂಲಕ ನಿಮ್ಮ ಕಾರ್ಡ್ ಅನ್ನು ನಿಷ್ಕ್ರೀಯಗೊಳಿಸಿ (ಬ್ಲಾಕ್) ಹಣವನ್ನು ಸುರಕ್ಷಿತವಾಗಿಟ್ಟುಕೊಳ್ಳಬಹುದು.

ಕಸ್ಟಮರ್ ಕೇರ್ಗೆ ಕರೆ ಮಾಡಿ
ನಿಮ್ಮ ಎಟಿಎಂ ಕಾರ್ಡ್ ಗಮನಿಸಿ. ಇದರ ಹಿಂಭಾಗದಲ್ಲಿ ಕಸ್ಟಮರ್ ಕೇರ್ ನಂಬರ್ ನಮೂದಾಗಿರುತ್ತದೆ. ಈ ಸಂಖ್ಯೆಯನ್ನು ಕೂಡಲೇ ಮೊಬೈಲ್ ಫೋನ್ನಲ್ಲಿ ಸೇವ್ ಮಾಡಿಟ್ಟುಕೊಳ್ಳಿ. ನಿಮ್ಮ ಡೆಬಿಟ್ ಕಾರ್ಡ್ ಕಳೆದು ಹೋದರೆ ಈ ಸಂಖ್ಯೆಗೆ ಕರೆ ಮಾಡಿ ಬ್ಲಾಕ್ ಮಾಡಲು ಮನವಿ ಸಲ್ಲಿಸಿ. ಜತೆಗೆ ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಕೂಡ ತಕ್ಷಣ ನಿಮಗೆ ಲಭ್ಯವಾಗುವಂತೆ ಸೇವ್ ಮಾಡಿಟ್ಟುಕೊಳ್ಳಿ. ಗಮನಿಸಿ ಇದು ಬೇರೆಯವರಿಗೆ ಸಿಗದಂತಿರಲಿ.

ನೆಟ್ ಬ್ಯಾಂಕಿಂಗ್
ಇದು ಇನ್ನೊಂದು ಸರಳ ವಿಧಾನವಾಗಿದ್ದು, ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಕೂಡಲೇ ಬ್ಲಾಕ್ ಮಾಡಬಹುದು. ಅದಕ್ಕಾಗಿ ನೀವು ಮೊದಲು ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಆಗಿ. ನಂತರ ಅಲ್ಲಿ ತಿಳಿಸಿರುವ ಮಾಹಿತಿಯನ್ನು ನಮೂದಿಸಿ. ಎಲ್ಲ ಮಾಹಿತಿಯನ್ನು ಸಮರ್ಪಕವಾಗಿ ನೀಡಿದ ಬಳಿಕ ಕಾರ್ಡ್ ಬ್ಲಾಕ್ ಆಗುತ್ತದೆ.

ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಸಮೀಪದಲ್ಲೇ ನಿಮ್ಮ ಬ್ಯಾಂಕ್ನ ಶಾಖೆ ಇದ್ದರೆ ಕೂಡಲೇ ಅಲ್ಲಿಗೆ ತೆರಳಿ. ಡೆಬಿಟ್ ಕಾರ್ಡ್ ಬ್ಲಾಕ್ ಮಾಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ. ಗಮನಿಸಿ, ಈ ವೇಳೆ ನೀವು ಸಮರ್ಪಕ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ. ಹೀಗಾಗಿ ಅಗತ್ಯ ದಾಖಲೆಗಳು ನಿಮ್ಮ ಬಳಿ ಇರಲಿ.

ಆನ್ಲೈನ್ ಮೂಲಕ ಬ್ಲಾಕ್ ಮಾಡಿ
ಬಹುತೇಕ ಬ್ಯಾಂಕ್ಗಳು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಹೊಂದಿವೆ. ಇದರ ಮೂಲಕ ಗ್ರಾಹಕರು ತಮ್ಮ ಎಟಿಎಂ ಕಾರ್ಡ್ ಬ್ಲಾಕ್ ಮಾಡಬಹುದು.

Comments (0)

Your email address will not be published. Required fields are marked *

Back to top button