
ಅಬುಧಾಬಿ: ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಿಚ್ಚುತೀವ್ರವಾದ ಬೆನ್ನಲ್ಲೇ, ಭಾರತದ ಇಂಧನ ಭದ್ರತೆಯನ್ನು ಖಾತ್ರಿಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿ ಒಪ್ಪಂದಕ್ಕೆ ಹರಸಾಹಸ ಪಟ್ಟಿದ್ದಾರೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಸಂದರ್ಭದಲ್ಲೇ ನಡೆದಿರುವ ಈ ಭೇಟಿ ಆರ್ಥಿಕವಾಗಿ ಮತ್ತು ಆಯಕಟ್ಟಿನ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.

ಇಂಧನ ಭದ್ರತೆಗೆ ‘ರಕ್ಷಾ ಕವಚ’!
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಧಾನಿ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಎರಡು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.ಎಲ್ಪಿಜಿ (LPG) ಪೂರೈಕೆ- ಭಾರತಕ್ಕೆ ದೀರ್ಘಕಾಲದವರೆಗೆ ದ್ರವೀಕೃತ ಪೆಟ್ರೋಲ್ ಅನಿಲ ಪೂರೈಸಲು ಯುಎಇ ಒಪ್ಪಿಗೆ ಸೂಚಿಸಿದೆ
3 ಕೋಟಿ ಬ್ಯಾರೆಲ್ ತೈಲ ಸಂಗ್ರಹ- ಭಾರತದ ಆಯಕಟ್ಟಿನ ಪೆಟ್ರೋಲಿಯಂ ನಿಕ್ಷೇಪಗಳಲ್ಲಿ (Strategic Petroleum Reserves) ಯುಎಇ ಸುಮಾರು 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಸಂಗ್ರಹಿಸಿಡಲಿದೆ. ಇದು ಯುದ್ಧದಂತಹ ತುರ್ತು ಪರಿಸ್ಥಿತಿಯಲ್ಲಿ ಭಾರತಕ್ಕೆ ವರದಾನವಾಗಲಿದೆ.
ರಕ್ಷಣಾ ಮತ್ತು ಮೂಲಸೌಕರ್ಯದಲ್ಲೂ ಕರಾರು!
ಕೇವಲ ತೈಲ ಮಾತ್ರವಲ್ಲದೆ, ರಕ್ಷಣಾ ಕ್ಷೇತ್ರದಲ್ಲಿಯೂ ನವದೆಹಲಿ ಮತ್ತು ಅಬುಧಾಬಿ ಕೈಜೋಡಿಸಿವೆ ಎರಡೂ ರಾಷ್ಟ್ರಗಳ ನಡುವೆ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಗೆ ಚೌಕಟ್ಟು ರೂಪಿಸಲಾಗಿದೆ. ಗುಜರಾತ್ನ ದ್ವಾರಕಾ ಜಿಲ್ಲೆಯ ವಡಿನಾರ್ನಲ್ಲಿ ಬೃಹತ್ ಹಡಗು ದುರಸ್ತಿ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ.ಭಾರತೀಯ ಮೂಲಸೌಕರ್ಯ ಕ್ಷೇತ್ರ ಹಾಗೂ ಆರ್ಬಿಎಲ್ ಬ್ಯಾಂಕ್ ಮತ್ತು ಸಮ್ಮಾನ್ ಕ್ಯಾಪಿಟಲ್ನಲ್ಲಿ ಯುಎಇ ಬರೋಬ್ಬರಿ 5 ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಯುದ್ಧದ ನಡುವೆ ಜಾಗರೂಕ ನಡೆ!
ಯುಎಇ ಮೇಲಿನ ಇರಾನ್ನ ಇತ್ತೀಚಿನ ದಾಳಿಯನ್ನು ಪ್ರಧಾನಿ ಮೋದಿ ಕಠಿಣವಾಗಿ ಖಂಡಿಸಿದ್ದಾರೆ. ಅಲ್ಲದೆ, ಹೋರ್ಮಜ್ ಜಲಸಂಧಿಯಲ್ಲಿ ಸುರಕ್ಷಿತ ನೌಕಾಯಾನಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. ಮೇ 15ರಿಂದ ಜಾರಿಗೆ ಬರುವಂತೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ರೂ.3 ಹೆಚ್ಚಳ ಮಾಡಲಾಗಿದ್ದು ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ $100 ದಾಟಿರುವ ಹಿನ್ನೆಲೆಯಲ್ಲಿ ಈ ಅನಿವಾರ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.
ಏನೇ ಆಗಲಿ ಯಾವುದೇ ಒಪ್ಪಂದ ಕ್ರಮ ಹಾಗೂ ಬೆಳವಣಿಗೆಗಳಾದರೂ ಭಾರತೀಯ ಪ್ರಜೆಗಳು ಬೆಲೆಯೇರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯರು ಮಿತವ್ಯಯಿಗಳಾಗಬೇಕು ಎಂದು ಹೇಳಿ ಕೇಂದ್ರ ಸರ್ಕಾರ ತನ್ನ ಅಸಮರ್ಥತೆಯನ್ನು ಮರೆಮಾಚಿದರೆ ವಿರೋಧ ಪಕ್ಷಗಳು ಇದು ಆಡಳಿತ ಪಕ್ಷ ಭಾರತೀಯರಿಗೆ ಮಾಡಿದ ಮಹಾನ್ ದ್ರೋಹ ಎಂದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಒಟ್ಟಿನಲ್ಲಿ ಅಪ್ಪ ಅಮ್ಮ ಜಗಳದಲ್ಲಿ ಕೂಸು ಬಡವಾದಂತೆ ಭಾರತೀಯರ ಪರಿಸ್ಥಿತಿ ಡೋಲಾಯಮಾನವಾಗಿದೆ.
#FreedomTV #ModiInUAE #EnergySecurity #IndiaUAE #PetrolPriceHike #StrategicPartnership #GlobalNews #MiddleEastCrisis #IndianEconomy #NarendraModi




