ರಾಜ್ಯದಲ್ಲಿ ಮತ್ತೆ ಸ್ಟಿಂಗ್ ಆಪರೇಷನ್ ಸದ್ದು – ಸಚಿವರಿಗೆ ಸಿಎಂ ಡಿಕೆಶಿ ಖಡಕ್ ಎಚ್ಚರಿಕೆ!
Sting operation makes waves in the state again – CM DK Shivakumar issues a stern warning to ministers!

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮತ್ತೆ ‘ಸ್ಟಿಂಗ್ ಆಪರೇಷನ್’ ಸದ್ದು ಮಾಡಿದೆ. ರಾಜ್ಯ ಸರ್ಕಾರದ ಪ್ರಭಾವಿ ಸಚಿವರನ್ನೇ ಗುರಿಯಾಗಿಸಿ ರಹಸ್ಯ ಕಾರ್ಯಾಚರಣೆಗಳು ನಡೆಯುತ್ತಿವೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ.
ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವು ಖಾಸಗಿ ಏಜೆನ್ಸಿಗಳ ಮೂಲಕ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಷಡ್ಯಂತ್ರ ರೂಪಿಸುತ್ತಿವೆ. ಸಚಿವರು ಯಾರನ್ನು ಭೇಟಿಯಾಗುತ್ತಾರೆ? ಎಲ್ಲಿಗೆ ತೆರಳುತ್ತಾರೆ? ಎಂಬ ಪ್ರತಿಯೊಂದು ಚಲನವಲನವನ್ನು ರೆಕಾರ್ಡ್ ಮಾಡಿ ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ನಡೆಸುತ್ತಿವೆ ಎಂದು ಸಿಎಂ ಡಿಕೆಶಿ ಹೇಳಿದ್ದಾರೆ.
ಯಾರೆಲ್ಲಾ ಹುಷಾರಾಗಿರಬೇಕು ಎಂದು ಪ್ರತ್ಯೇಕವಾಗಿ ಸಿಎಂ ಅಲರ್ಟ್ ಮೆಸೇಜ್ ನೀಡಿದ್ದಾರೆ. ಗುಪ್ತಚರ ಮಾಹಿತಿ ಆಧರಿಸಿ ಡಿಕೆಶಿ ಸುಳಿವು ನೀಡಿದ್ದು, ಟಾರ್ಗೆಟ್ ಮಾಡಿರುವ ಐವರು ಸಚಿವರ ಜೊತೆ ಡಿಕೆಶಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಒಟ್ಟಾಗಿ ಹೇಳಿ ಬಳಿಕ ಸಿಎಂ ಆ ಐದು ಸಚಿವರ ಜೊತೆ ಪ್ರತ್ಯೇಕ ಮಾತುಕತೆ ಮಾಡಿ ಬುದ್ಧಿಮಾತು ಹೇಳಿದ್ದಾರೆ.
ಡಿಕೆಶಿ ಮಾತುಕತೆ ನಡೆಸಿರುವ ಆ ಐವರು ಸಚಿವರು ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಇನ್ನೂ ಸಭೆಯಲ್ಲಿದ್ದ ಪ್ರತಿಯೊಬ್ಬ ಸಚಿವರಿಗೂ ತಮ್ಮ ನಡವಳಿಕೆ ಹಾಗೂ ಸಂಭಾಷಣೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ನೀಡಿರುವ ಈ ಸಂದೇಶವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.




