DHARWAD

ಜಮೀನು ಗಲಾಟೆ-ರೌಡಿಗಳ ಅಟ್ಟಹಾಸ; ಐವರ ಬಂಧನ!

Land issue Shoot out between rowdies

ಧಾರವಾಡ: ಅವಳಿ ನಗರಿ ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಶೀಟರ್‌ಗಳು ಸೃಷ್ಟಿಸಿದ್ದ ಶೂಟೌಟ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಡಸಿನಕೊಪ್ಪ ಗ್ರಾಮದ ಬಳಿ ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಯುವಕನ ಮೇಲೆ ಫೈರಿಂಗ್ ನಡೆಸಿದ್ದ ಇಬ್ಬರು ಕುಖ್ಯಾತ ರೌಡಿಶೀಟರ್‌ಗಳು ಸೇರಿದಂತೆ ಐವರು ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಜಮೀನು ಸಂಘರ್ಷಕ್ಕೆ ಬಂದೂಕು ದರ್ಬಾರ್!


ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿರುವ ಪ್ರಕಾರ, ತಡಸಿನಕೊಪ್ಪ ಗ್ರಾಮದ ಬಳಿ ಜಮೀನು ಖರೀದಿ ಮತ್ತು ಅಭಿವೃದ್ಧಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಭೀಕರ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ರೌಡಿಶೀಟರ್‌ಗಳಾದ ಪ್ರವೀಣ್ ಸುತಾರ್ ಹಾಗೂ ಸುಂದರಪೌಲ್ ಗನ್ ಕೈಗೆತ್ತಿಕೊಂಡು ಯುವಕನ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಘೋರ ಕೃತ್ಯದಲ್ಲಿ ವಿಠ್ಠಲ ಎಂಬ ಯುವಕನ ಕಾಲಿಗೆ ಬುಲೆಟ್ ತಗುಲಿ ತೀವ್ರ ಗಾಯಗೊಂಡಿದ್ದಾನೆ. ಪ್ರಾರಂಭದಲ್ಲಿ ಸುಂದರಪೌಲ್‌ನ ಅಂಗರಕ್ಷಕರು ತಮ್ಮ ಪಿಸ್ತೂಲ್‌ನಿಂದ ಫೈರಿಂಗ್ ಮಾಡಿದ್ದಾರೆ ಎಂದು ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಲಾಗಿತ್ತು. ಆದರೆ, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಶೂಟೌಟ್‌ನ ಭೀಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದರಲ್ಲಿ ರೌಡಿಶೀಟರ್‌ಗಳಾದ ಸುಂದರಪೌಲ್ ಮತ್ತು ಪ್ರವೀಣ್ ಸುತಾರ್ ಅವರೇ ಸ್ವತಃ ಪಿಸ್ತೂಲ್ ಹಾಗೂ ರಿವಾಲ್ವರ್ ಹಿಡಿದು ಫೈರಿಂಗ್ ಮಾಡುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್, ಆರೋಪಿಗಳ ಬೇಟೆಗೆ ತಕ್ಷಣ 5 ಪ್ರತ್ಯೇಕ ಪೊಲೀಸ್ ತಂಡಗಳನ್ನು ರಚಿಸಿದ್ದರು.

ಐವರು ಖದೀಮರು ತಂದೆಯೇ ಕಿಂಗ್‌ಪಿನ್!
ಪೊಲೀಸ್ ಕಮಿಷನರ್ ಸಾರಥ್ಯದಲ್ಲಿ ಕಾರ್ಯಾಚರಣೆ ನಡೆಸಿದ ಖಾಕಿ ಪಡೆ, ಸದ್ಯ ಐವರು ಪ್ರಮುಖ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ. ಪ್ರವೀಣ್ ಸುತಾರ್, ಬೆಂಜಮಿನ್, ಪಿಲೋಮಿನ್, ವಿಶಾಲ್ ಮತ್ತು ಇಂದ್ರಪಾಲ್ ಬಂಧಿತರಾಗಿದ್ದು, ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಸುಂದರಪೌಲ್ ತಂದೆ ಫಿಲೋಮಿನ್, ಫೋನ್ ಮೂಲಕವೇ ಜಮೀನಿನ ಬಳಿ ಗಲಾಟೆ ಮತ್ತು ಫೈರಿಂಗ್ ಮಾಡಲು ಗೈಡ್ ಮಾಡುತ್ತಿದ್ದ ಎಂಬ ಶಾಕಿಂಗ್ ಸತ್ಯ ಹೊರಬಿದ್ದಿದೆ. ಪ್ರವೀಣ್ ಸುತಾರ್ ತನ್ನದೇ ಗನ್‌ನಿಂದ ಪೈರ್ ಮಾಡಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ. ಆದರೆ, ತನ್ನ ಬಾಡಿಗಾರ್ಡ್ ಗನ್ ಕಿತ್ತುಕೊಂಡು ಫೈರಿಂಗ್ ಮಾಡಿರುವ ಮತ್ತೊಬ್ಬ ಪ್ರಮುಖ ಆರೋಪಿ ಸುಂದರಪೌಲ್ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.

ಪೊಲೀಸ್ ಕಮಿಷನರ್ ಕ್ರಮ
“ಗಾಯಾಳು ಯುವಕ ಪರಿಶಿಷ್ಟ ವರ್ಗಕ್ಕೆ (ST) ಸೇರಿದವನಾಗಿದ್ದಾನೆ. ಹೀಗಾಗಿ ಆರೋಪಿಗಳ ವಿರುದ್ಧ ಕೊಲೆ ಯತ್ನ (IPC 307), ಆರ್ಮ್ಸ್ ಆ್ಯಕ್ಟ್ ಜೊತೆಗೆ ಜಾತಿ ನಿಂದನೆ (SC/ST ಕಾಯ್ದೆ) ಕೇಸ್ ಕೂಡ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ ಪಿಸ್ತೂಲ್, ರಿವಾಲ್ವರ್ ಹಾಗೂ ಕೃತ್ಯಕ್ಕೆ ಬಳಸಿದ್ದ ದುಬಾರಿ ಫಾರ್ಚೂನರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.” ಕಮಿಷನರ್ ಹೇಳಿದರು.

ಅವಳಿ ನಗರಿಯಲ್ಲಿ ರೌಡಿಶೀಟರ್‌ಗಳ ಗನ್ ಕಲ್ಚರ್ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಆದರೆ ವಿಡಿಯೋ ಸಾಕ್ಷಿ ಸಿಗುತ್ತಿದ್ದಂತೆ ಕಮಿಷನರ್ ಎನ್. ಶಶಿಕುಮಾರ್ ಪಡೆ ಕೇವಲ 24 ಗಂಟೆಗಳಲ್ಲಿ ಆರೋಪಿಗಳನ್ನು ಜೈಲಿಗಟ್ಟುವ ಮೂಲಕ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದೆ. ತಲೆಮರೆಸಿಕೊಂಡಿರುವ ಸುಂದರಪೌಲ್ ಸಿಕ್ಕಿಬಿದ್ದರೆ ಈ ಜಮೀನು ಮಾಫಿಯಾದ ಅಸಲಿ ಮುಖವಾಡ ಕಳಚಲಿದೆ.

#FreedomTV #DharwadShooting #HubliDharwad #DharwadCrime #Rowdysheeter #FiringCase #NShashikumar #PoliceAction #Encounter #LandDispute #BreakingNews #KannadaNews

Comments (0)

Your email address will not be published. Required fields are marked *

Back to top button