ಶಾಂತಿ ಕದಡುವವರಿಗೆ ಕಾಂಗ್ರೆಸ್ ಕುಮ್ಮಕ್ಕು- ಶ್ರೀನಿವಾಸ ಪೂಜಾರಿ ಆಕ್ರೋಶ!
MP Kota Srinivasa Poojary slams State govt on cases aquitted on muslims and SIR oppose statement

ಉಡುಪಿ: ರಾಜ್ಯದಲ್ಲಿ ತೈಲ ಬೆಲೆ ದರ ಏರಿಕೆ, ಲಾಡ್ಲೆ ಮಶಾಕ್ ದರ್ಗಾ ಕೇಸ್ ವಾಪಸ್ ಹಾಗೂ ಅಕ್ರಮ ವಲಸಿಗರ ಮತದಾರರ ತೀವ್ರಪಟ್ಟಿ ಪರಿಶೀಲನೆ (SIR) ಬಗ್ಗೆ ಕಾಂಗ್ರೆಸ್ ವಿರೋಧಿಸುತ್ತಿರುವುದಕ್ಕೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.ರಾಜ್ಯ ಸರ್ಕಾರದ ಜನವಿರೋಧಿ ಹಾಗೂ ತುಷ್ಟೀಕರಣ ನೀತಿಗಳನ್ನು ಖಂಡಿಸಿದರು.

SIR ಅಕ್ರಮ ವಲಸಿಗರನ್ನು ಓಡಿಸುವ ಅಸ್ತ್ರ!
ಮತದಾರರ ಪಟ್ಟಿ ಪರಿಶೀಲನಾ ಪ್ರಕ್ರಿಯೆಯನ್ನು (SIR) ಬಡವರ ಮತ ಕಸಿಯುವ ತಂತ್ರ ಎಂದು ಹಗುರವಾಗಿ ಬಿಂಬಿಸುತ್ತಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಕೋಟಾ ಶ್ರೀನಿವಾಸ್ ಪೂಜಾರಿ ಆಕ್ರೋಶ ಹೊರಹಾಕಿದ್ದಾರೆ.”ಇದು ಈ ದೇಶದ ಬಡ ನಾಗರಿಕರ ಅಥವಾ ಕಾನೂನುಬದ್ಧ ಮತದಾರರ ಹಕ್ಕನ್ನು ಕಸಿಯುವ ಪ್ರಕ್ರಿಯೆಯಲ್ಲ. ಬದಲಾಗಿ, ವಿದೇಶಗಳಿಂದ ಅಕ್ರಮವಾಗಿ ಬಂದು ಇಲ್ಲಿ ನೆಲೆಸಿರುವ, ದೇಶದ ಪೌರತ್ವ ಇಲ್ಲದ ನುಸುಳುಕೋರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಕಾನೂನಾತ್ಮಕ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆ ನಡೆಯುವಾಗ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಏಜೆಂಟರು ಸ್ಥಳದಲ್ಲೇ ಇರುತ್ತಾರೆ. ಇಷ್ಟಿದ್ದರೂ ಕಾಂಗ್ರೆಸ್ ನಾಯಕರು ಮತ ಬ್ಯಾಂಕ್ ರಾಜಕಾರಣಕ್ಕಾಗಿ ನಿರಾಧಾರವಾಗಿ ಆರೋಪ ಮಾಡುತ್ತಿರುವುದು ಸರಿಯಲ್ಲ” ಎಂದು ತಿರುಗೇಟು ನೀಡಿದರು.
ಬಾಂಬ್ ಇಡುವ, ದೇವಸ್ಥಾನ ಧ್ವಂಸ ಮಾಡುವ ವರ್ಗಕ್ಕೆ ಕಾಂಗ್ರೆಸ್ ಕುಮ್ಮಕ್ಕು!
ಲಾಡ್ಲೆ ಮಶಾಕ್ ದರ್ಗಾ ಗಲಭೆ ಪ್ರಕರಣದ ಆರೋಪಿಗಳ ಮೇಲಿನ ಕ್ರಿಮಿನಲ್ ಕೇಸ್‌ಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವ ನಿರ್ಧಾರಕ್ಕೆ ಸಂಸದರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.”ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಹತ್ತಾರು ಘಟನೆಗಳು ನಡೆದಿವೆ. ಕುಕ್ಕರ್‌ನಲ್ಲಿ ಬಾಂಬ್ ಇಡುವವರು, ಶಿವಲಿಂಗ ಇರುವ ಪವಿತ್ರ ದೇವಸ್ಥಾನಗಳ ಮೇಲೆ ದಾಳಿ ಮಾಡಿ ಗಲಭೆ ಎಬ್ಬಿಸುವವರ ಪರವಾಗಿ ಈ ಸರ್ಕಾರ ನಿಂತಿದೆ. ಗಲಭೆಕೋರರ ಮೇಲಿನ ಗಂಭೀರ ಪ್ರಕರಣಗಳನ್ನು ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ವಾಪಸ್ ಪಡೆಯುವ ಮೂಲಕ ಸರ್ಕಾರವೇ ಅಪರಾಧಿಗಳಿಗೆ ಬಹಿರಂಗವಾಗಿ ಕುಮ್ಮಕ್ಕು ನೀಡುತ್ತಿದೆ. ಸರ್ಕಾರದ ಇಂತಹ ದೇಶವಿರೋಧಿ ನಿಲುವು ಎಂದಿಗೂ ಒಪ್ಪಲು ಸಾಧ್ಯವಿಲ್ಲ” ಎಂದರು
ತೈಲ ದರ ನಿಯಂತ್ರಣ- ಕೇಂದ್ರಕ್ಕೆ ಶ್ಲಾಘನೆ
ಇಂಧನ ದರ ಏರಿಕೆ ನೆಪದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಧೋರಣೆಯನ್ನು ಕೋಟಾ ಶ್ರೀನಿವಾಸ್ ಪೂಜಾರಿ ತರಾಟೆಗೆ ತೆಗೆದುಕೊಂಡರು.”ಸಿದ್ದರಾಮಯ್ಯನವರಿಗೆ ಕೇಂದ್ರ ಸರ್ಕಾರವನ್ನು ಟೀಕೆ ಮಾಡಲು ಯಾವಾಗಲೂ ಒಂದು ಕಾರಣ ಬೇಕಿರುತ್ತದೆ. ಸದ್ಯ ಜಗತ್ತಿನಲ್ಲಿ ಎಲ್ಲೂ ಕ್ರಿಕೆಟ್ ಪಂದ್ಯ ನಡೆಯುತ್ತಿಲ್ಲ, ಬದಲಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ಭೀಕರ ಯುದ್ಧ ನಡೆಯುತ್ತಿದೆ. ಇಂತಹ ಯುದ್ಧದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ತನ್ನ ಅದ್ಭುತ ಮುಂದಾಲೋಚನೆಯಿಂದ ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಪರಿಸ್ಥಿತಿಯನ್ನು ಸುದೀರ್ಘ ಕಾಲ ಸಮರ್ಥವಾಗಿ ನಿಭಾಯಿಸಿದೆ. ಭಾರತ ಸರ್ಕಾರವು ಮೊದಲೇ ಸಾಕಷ್ಟು ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹಿಸಿ ಇಟ್ಟುಕೊಳ್ಳುವ ಮೂಲಕ ದೇಶದ ಜನರಿಗೆ ಆರ್ಥಿಕ ರಕ್ಷಣೆ ನೀಡುವ ಕೆಲಸ ಮಾಡಿದೆ. ಇಂತಹ ಜಾಗತಿಕ ಬಿಕ್ಕಟ್ಟಿನ ವಿಚಾರದಲ್ಲೂ ಕೀಳು ರಾಜಕಾರಣ ಮಾಡುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ” ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ.
#FreedomTV #KotaSrinivasPoojari #Udupi #Chikkamagaluru #SiddaramaiahGovt #FuelPriceHike #AppeasementPolitics #VoterListVerification #CongressVsBJP #KarnatakaPolitics #BreakingNews