ಬಿಡದಿ ಟೌನ್‌ಶಿಪ್‌ಗೆ ರೈತರು ಸೈ; ಜೂನ್ 1ರಿಂದ ಪರಿಹಾರ -ಡಿಕೆ ಶಿವಕುಮಾರ್!
Compensation will be given by June 1 for the Bidadi Township project people

ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಪ್ರಸ್ತಾವಿತ ‘ಗ್ರೇಟರ್ ಬೆಂಗಳೂರು ಟೌನ್‌ಶಿಪ್’ ಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹೊಸ ಸುದ್ದಿ ನೀಡಿದ್ದಾರೆ. ಯೋಜನೆಗೆ ರೈತರಿಂದ ಭಾರಿ ವಿರೋಧವಿದೆ ಎನ್ನುತ್ತಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಾದವನ್ನು ತಳ್ಳಿಹಾಕಿರುವ ಡಿಸಿಎಂ, “ಸುಮಾರು ಶೇ. 80 ರಷ್ಟು ರೈತರು ಯೋಜನೆಗೆ ಒಪ್ಪಿಗೆ ನೀಡಿದ್ದು, ಜೂನ್ ಮೊದಲ ವಾರದಿಂದಲೇ ಪರಿಹಾರದ ಹಣ ವಿತರಣೆ ಆರಂಭವಾಗಲಿದೆ” ಎಂದು ಪ್ರಕಟಿಸಿದ್ದಾರೆ.ಬಿಡದಿ ಟೌನ್‌ಶಿಪ್ ಯೋಜನೆ ಕುರಿತಂತೆ ರೈತರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಅವರು ವಿವರ ನೀಡಿದರು.

ಜೂನ್ 1 ರಿಂದಲೇ ಪರಿಹಾರ ಹಣ ಬಿಡುಗಡೆ!
“ನಮ್ಮ ಗ್ರೇಟರ್ ಬೆಂಗಳೂರು ಟೌನ್‌ಶಿಪ್ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ರೈತರು ಬಂದು ಸಭೆ ನಡೆಸಿದ್ದಾರೆ. ಅವರಿಗೆ ನೀಡಲಾಗುವ ಪರಿಹಾರದ ಕುರಿತು ನಾನು ಈಗಾಗಲೇ ಸ್ಪಷ್ಟ ಘೋಷಣೆ ಮಾಡಿದ್ದೇನೆ. ಹೆಚ್ಚು ಕಡಿಮೆ ಶೇ.80ರಷ್ಟು ರೈತರು ಬಂದು ತಮ್ಮ ಒಪ್ಪಿಗೆ ಪತ್ರ ನೀಡಿದ್ದಾರೆ. ಅಷ್ಟೇ ಅಲ್ಲದೆ, ಪರಿಹಾರದ ಹಣವನ್ನು ಆದಷ್ಟು ಬೇಗ ಬಿಡುಗಡೆ ಮಾಡುವಂತೆ ಅವರೇ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ” ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಇನ್ನು ಮೂರು ದಿನಗಳಲ್ಲಿ ಗ್ರಾಮವಾರು ಅಂತಿಮ ಅಧಿಸೂಚನೆಗಳನ್ನು ಹೊರಡಿಸಲಾಗುವುದು. ಜೂನ್ ಮೊದಲ ವಾರದಿಂದಲೇ ರೈತರ ಖಾತೆಗೆ ಪರಿಹಾರದ ಹಣ ಬಿಡುಗಡೆ ಮಾಡಲು ಪ್ರಾರಂಭಿಸುತ್ತೇವೆ. ಜೂನ್ 30ರೊಳಗೆ ಎಲ್ಲಾ ಸಂಬಂಧಿತ ಅಧಿಸೂಚನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಿದ್ದು, ಹಳ್ಳಿವಾರು ವಿಭಾಗ ಮಾಡಿ ಪ್ರತ್ಯೇಕ ಹಂತಗಳಲ್ಲಿ ಯೋಜನೆ ಜಾರಿಗೆಯಾಗಲಿದೆ ಎಂದು ಹೇಳಿದರು.
ಇದು ಕುಮಾರಸ್ವಾಮಿಯ ಕೂಸು – ಡಿಸಿಎಂ ಸವಾಲು!
ಈ ಯೋಜನೆ ಮೂಲಕ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದ ಡಿಸಿಎಂ “ಈ ಯೋಜನೆ ಡಿ.ಕೆ. ಶಿವಕುಮಾರ್ ಪ್ರಾರಂಭಿಸಿದ್ದಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಈ ಟೌನ್‌ಶಿಪ್ ಯೋಜನೆ ಹುಟ್ಟಿಕೊಂಡಿದ್ದು. ಅವರ ಅವಧಿಯಲ್ಲೇ ಇದನ್ನು ಪ್ರಸ್ತಾಪಿಸಿ ‘ಡಿಎಲ್‌ಎಫ್’ (DLF) ಕಂಪನಿಗೆ ನೀಡಲಾಗಿತ್ತು. ಆ ಬಳಿಕ ಇದು ಕಾರ್ಯಸಾಧ್ಯವಲ್ಲ ಎಂದು ಡಿಎಲ್‌ಎಫ್ ಯೋಜನೆಯಿಂದ ಹಿಂದೆ ಸರಿದಿತ್ತು. ಈಗ ಅವರೇ ಇದನ್ನು ವಿರೋಧಿಸುತ್ತಿದ್ದಾರೆ. ಜೆಡಿಎಸ್ ನಾಯಕರೊಂದಿಗೆ ಅವರು ಆಯ್ಕೆ ಮಾಡುವ ಯಾವುದೇ ಸ್ಥಳ ಮತ್ತು ಸಮಯದಲ್ಲಿ ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ” ಎಂದು ಓಪನ್ ಚಾಲೆಂಜ್ ಹಾಕಿದರು.
ಅಭಿವೃದ್ಧಿ ಜಾಗದಲ್ಲಿ ಸೈಟ್‌ಗೆ ರೈತರ ಬೇಡಿಕೆ
ಸಭೆಯಲ್ಲಿ ರೈತರು ತಮ್ಮ ಭೂಮಿಯನ್ನು ಸರ್ಕಾರಕ್ಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ಬೇಡಿಕೆಗಳನ್ನು ಡಿಎಸಿಎಂ ಮುಂದಿಟ್ಟಿದ್ದಾರೆ. ಯೋಜನೆ ಮುಗಿದು ಅಭಿವೃದ್ಧಿಯಾಗುವ ಜಾಗದಲ್ಲೇ ತಮಗೆ ಕನಿಷ್ಠ 30X40 ಅಳತೆಯ ಸೈಟ್‌ಗಳನ್ನು ಮಂಜೂರು ಮಾಡಬೇಕು. ಹಣದ ಜೊತೆಗೆ ಸೈಟ್ ನೀಡಿದರೆ ನಮ್ಮ ಮುಂದಿನ ಭವಿಷ್ಯ ಭದ್ರವಾಗುತ್ತದೆ ಎಂದು ರೈತರು ವಿನಂತಿಸಿದರು. ರೈತರ ಈ ಬೇಡಿಕೆಯನ್ನು ಒಪ್ಪಿಕೊಳ್ಳದ ಡಿಸಿಎಂ, ‘ಈ ಕುರಿತು ಸರ್ಕಾರ ಗಂಭೀರವಾಗಿ ಯೋಚನೆ ಮಾಡುತ್ತದೆ’ ಎಂದು ಭರವಸೆ ನೀಡಿದ್ದಾರೆ.
ಸದ್ಯ ಬಿಡದಿ ಟೌನ್‌ಶಿಪ್ ಯೋಜನೆಗೆ ರೈತರು ಗ್ರೀನ್ ಸಿಗ್ನಲ್ ನೀಡಿರುವುದು ಸರ್ಕಾರಕ್ಕೆ ದೊಡ್ಡ ಯಶಸ್ಸು ತಂದಿದ್ದರೂ, ಕನಕಪುರ ಬಂಡೆ VS ರಾಮನಗರದ ಕುಮಾರಣ್ಣನ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ಈ ಟೌನ್‌ಶಿಪ್ ಮತ್ತೊಮ್ಮೆ ಮುಖ್ಯ ವೇದಿಕೆಯಾಗಲಿರುವುದು ವಿಶೇಷ.
#BidadiTownship #DKShivakumar #HDKumaraswamy #GreaterBengaluruTownship #FarmersCompensation #Ramanagara #LandAcquisition #KarnatakaGovernment #BengaluruDevelopment #BreakingNews #FreedomTV