ರೈತರ ಭೂಮಿ ಒಕ್ಕಲೆಬ್ಬಿಸಲು ಮುಂದಾದ ಅರಣ್ಯ ಇಲಾಖೆ – ದಿಕ್ಕೆಟ್ಟ ಅನ್ನದಾತರು!
Land grab by Forest department in Vijyanagara distrit Harapanahalli

ವಿಜಯನಗರ: ತಲೆತಲಾಂತರದಿಂದ ಉಳುಮೆ ಮಾಡಿಕೊಂಡು ಬಂದ ಭೂಮಿ ಇಂದು ಅರಣ್ಯ ಇಲಾಖೆಯ ಪಾಲಾಗುವ ಭೀತಿ ಎದುರಾಗಿದೆ. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಡಿಕೇರಿ ತಾಂಡಾದ ಸುಮಾರು 113 ರೈತ ಕುಟುಂಬಗಳು ತಮ್ಮ ಬದುಕಿಗೆ ಆಧಾರವಾಗಿದ್ದ ಜಮೀನನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದು, ದಿಕ್ಕು ತೋಚದಂತಾಗಿದೆ.

ನಾಲ್ಕು ದಶಕಗಳಿಂದ ಕೃಷಿ, ಈಗ ಅತಂತ್ರ ಸ್ಥಿತಿ
1965ರಿಂದಲೂ ಈ ತಾಂಡಾದ ರೈತರು ಸಣ್ಣ ಸಣ್ಣ ತುಂಡು ಭೂಮಿಯಲ್ಲಿ ಸಾಗುವಳಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಸುಮಾರು 190 ರಿಂದ 200 ಎಕರೆ ಜಮೀನಿನಲ್ಲಿ ಈ ಕುಟುಂಬಗಳು ಒಕ್ಕಲುತನ ಮಾಡುತ್ತಿವೆ. 1985-86ರ ಅವಧಿಯಲ್ಲಿ ಅಂದಿನ ರಾಜ್ಯ ಸರ್ಕಾರ ನೀಡಿದ್ದ ಕೈಬರಹದ ಪಹಣಿಗಳು ತರ ಬಳಿ ಇವೆ. ಆದರೆ, ಈ ದಾಖಲೆಗಳನ್ನು ಪರಿಗಣಿಸದೆ ಅರಣ್ಯ ಇಲಾಖೆ ಒಕ್ಕಲೆಬ್ಬಿಸಲು ಮುಂದಾಗಿದೆ.ದಾಖಲೆಗಳಿದ್ದರೂ ಅರಣ್ಯ ಇಲಾಖೆ ಪರಿಗಣಿಸದಿರುವುದು ರೈತರಿಗೆ ಮಾಡುವ ಘೋರ ಅನ್ಯಾಯವಾಗಿದೆ.
ನೋಟಿಸ್ ಇಲ್ಲ ತುರ್ತು ಕ್ರಮ!
ಯಾವುದೇ ಪೂರ್ವ ಸೂಚನೆ ಅಥವಾ ನೋಟಿಸ್ ನೀಡದೆ ಜಮೀನಿನಿಂದ ರೈತರನ್ನು ಹೊರಹಾಕುವ ಅರಣ್ಯ ಇಲಾಖೆಯ ಕ್ರಮಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ.ಈಗಾಗಲೇ ಸುತ್ತಮುತ್ತಲಿನ ಹಲವು ಜಮೀನುಗಳನ್ನು ವಶಪಡಿಸಿಕೊಂಡಿರುವ ಇಲಾಖೆ, ಈಗ ಈ ಬಡ ರೈತರ ಹೊಟ್ಟೆಯ ಮೇಲೆ ಹೊಡೆಯಲು ಪ್ಲಾನ್ ಮಾಡಿದೆ.ಅನಾದಿ ಕಾಲದಿಂದಲೂ ನಾವು ಪರಿಸರದ ನಡುವೆ ಬದುಕು ಕಟ್ಟಿಕೊಂಡಿದ್ದು ಈಗ ನಮ್ಮ ಬದುಕು ಮೂರಾಬಟ್ಟೆಯಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಕೇಂದ್ರ ಸರ್ಕಾರದ ಪಾರಂಪರಿಕ ಅರಣ್ಯ ಹಕ್ಕು ಕಾಯಿದೆಯಡಿ ದಶಕಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂಮಿಯ ಹಕ್ಕು ನೀಡಲು ಅವಕಾಶವಿದೆ. ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಭೂಮಿ ನಂಬಿ ಬದುಕುತ್ತಿರುವವರನ್ನು ಏಕಾಏಕಿ ತೆರವುಗೊಳಿಸಬಾರದು ಎಂಬ ನಿಯಮವಿದ್ದರೂ, ಇಲಾಖೆ ಇದನ್ನು ಉಲ್ಲಂಘಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಜಂಟಿ ಸರ್ವೇಗೆ ರೈತರ ಆಗ್ರಹ
“ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಕೊಡಿಸಬೇಕು.ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸೇರಿ ಜಂಟಿ ಸರ್ವೇ ನಡೆಸುವವರೆಗೆ ನಮ್ಮನ್ನು ಒಕ್ಕಲೆಬ್ಬಿಸಬಾರದು,”ಎಂದು ಕಂಡಿಕೇರಿ ತಾಂಡಾದ ರೈತರು ಕಣ್ಣೀರು ಹಾಕುತ್ತಿದ್ದಾರೆ.ಅರಣ್ಯ ಇಲಾಖೆಯ ಈ ನಡೆಯಿಂದಾಗಿ ಬಡ ಕುಟುಂಬಗಳು ಬೀದಿ ಪಾಲಾಗುವ ಭೀತಿಯಲ್ಲಿದ್ದು,ಸರ್ಕಾರ ಇವರ ಹಿತ ಕಾಯುವುದೇ ಎಂಬುದು ಯಕ್ಷಪ್ರಶ್ನೆ.
#Vijayanagara #Harapanahalli #KandikeriThanda #FarmersProtest #ForestDepartment #LandDispute #SaveFarmers #FreedomTV #KarnatakaNews #ForestRightsAct #JusticeForFarmers