MM ಹಿಲ್ಸ್ ಕಾಲ್ನಡಿಗೆ ಸಂಚಾರ ಬಂದ್ ಸಚಿವ ಖಂಡ್ರೆ ಆದೇಶ!

ಬೆಂಗಳೂರು: ನಾಗಮಲೆಯಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರ ಸುರಕ್ಷತೆಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಶಿವರಾತ್ರಿ ಮತ್ತು ಯುಗಾದಿ ಜಾತ್ರೆ ಸಂದರ್ಭದಲ್ಲಿ ಮಾತ್ರವೇ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗಲು ಅವಕಾಶ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ವಿಕಾಸಸೌಧದಲ್ಲಿ ಇಂದು ಹಿರಿಯ ಅಧಿಕಾರಿಗಳು ಹಾಗೂ ಚಾಮರಾಜನಗರ ಅರಣ್ಯಾಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಅವರು ಭಕ್ತರ ಪ್ರಾಣ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ನಿರ್ದೇಶಿಸಿದ್ದಾರೆ
ಕಾಲ್ನಡಿಗೆಗೆ ಮಿತಿ: ನಾಗಮಲೆಗೆ ಈ ಹಿಂದೆ ಇದ್ದ 14 ಕಿ.ಮೀ. ಕಾಲ್ನಡಿಗೆಯನ್ನು ರದ್ದುಪಡಿಸಿ, ಕೇವಲ 3 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.
ಜೀಪ್ ಸಂಚಾರ ಕಡ್ಡಾಯ: ಟಿಕೆಟ್ ಕೌಂಟರ್ ಬಳಿಯಿಂದ ಭಕ್ತರು ಜೀಪ್ ಮೂಲಕವೇ ತೆರಳುವುದು ಕಡ್ಡಾಯ.ದುರ್ಗಮವಾಗಿರುವ ಅಂತಿಮ 3 ಕಿ.ಮೀ. ಮಾತ್ರ ನಡೆದು ಹೋಗಲು ಅವಕಾಶವಿರುತ್ತದೆ.
ಗೈಡ್ ಸೌಲಭ್ಯ: ಕಾಲ್ನಡಿಗೆಯಲ್ಲಿ ಸಾಗುವ ಭಕ್ತರಿಗೆ ವಾಕಿಟಾಕಿ ಮತ್ತು ಸುರಕ್ಷತಾ ಸಲಕರಣೆ ಹೊಂದಿರುವ ಮಾರ್ಗದರ್ಶಕರ (ಗೈಡ್) ಸೇವೆಯನ್ನು ಒದಗಿಸಲಾಗುವುದು.
ವ್ಯೂ ಲೈನ್ ನಿರ್ಮಾಣ: ಕಾಲ್ನಡಿಗೆ ಪಥದ ಎರಡೂ ಬದಿಯಲ್ಲಿ ವನ್ಯಮೃಗಗಳು ಸುಲಭವಾಗಿ ಗೋಚರಿಸುವಂತೆ ಗಿಡಗಂಟಿಗಳನ್ನು ತೆರವುಗೊಳಿಸಿ ‘ಗೋಚರರೇಖೆ’ (View Line) ನಿರ್ಮಿಸಲು ಸೂಚಿಸಲಾಗಿದೆ.
ಮಾದಪ್ಪನ ದರ್ಶನಕ್ಕೆ ಏಳು ಮಲೆ ಹತ್ತಿ ಹೋಗುವ 7 ಕಿ.ಮೀ. ಹಾದಿಯಲ್ಲಿ ವರ್ಷವಿಡೀ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಕೇವಲ ಶಿವರಾತ್ರಿ ಮತ್ತು ಯುಗಾದಿ ಹಬ್ಬದ ಸಂದರ್ಭದಲ್ಲಿ ಮಾತ್ರ ಈ ಹಾದಿಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಆ ಸಮಯದಲ್ಲಿ ಹೆಚ್ಚಿನ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲು ಆದೇಶಿಸಲಾಗಿದೆ.
ಜಾಗೃತಿ ಫಲಕಗಳ ಅಳವಡಿಕೆ
ಬೆಟ್ಟದ ಮೆಟ್ಟಿಲುಗಳು ಮತ್ತು ಟಿಕೆಟ್ ಕೌಂಟರ್ ಬಳಿ ಆನೆ,ಚಿರತೆ ಹಾಗೂ ಹುಲಿಗಳ ಸಂಚಾರದ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಹಾಕಲು ಸೂಚಿಸಲಾಗಿದೆ.ಕಾಲ್ನಡಿಗೆಯ ಬದಲು ಸರ್ಕಾರಿ ಬಸ್ ಸೌಲಭ್ಯ ಬಳಸುವಂತೆ ಭಕ್ತರಲ್ಲಿ ಜಾಗೃತಿ ಮೂಡಿಸಲು ಇಲಾಖೆ ನಿರ್ಧರಿಸಿದೆ.ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
#MaleMahadeshwaraHills #EshwarKhandre #LeopardAttack #ForestDepartment #Nagamale #Chamarajanagar #PublicSafety #BreakingNews #KarnatakaForest #FreedomTV