
ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಮದನ್ ರಾಜ್ ಕಾಮಕಾಂಡದ ಕರಾಳ ಕಥೆಯೊಂದು ಬಯಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಈತ, ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ಪ್ರೀತಿಯ ಹೆಸರಲ್ಲಿ ದೋಖಾ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾನೆ. ಮದನ್ ರಾಜ್ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದಲ್ಲದೆ, ಆಕೆಯ ಕಾಮದ ಹಸಿವು ತೀರಿಸಿಕೊಂಡ ನಂತರ ಈಗ ಮತ್ತೊಂದು ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದಾನೆ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ.

ಈ ಪ್ರಕರಣದ ಅತ್ಯಂತ ಭೀಕರ ತಿರುವು ಎಂದರೆ, ಆರೋಪಿ ಮದನ್ ರಾಜ್ ಯುವತಿಯನ್ನು ಮುಗಿಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. “ನಾವು ಒಟ್ಟಿಗೆ ಸಾಯೋಣ” ಎಂದು ಯುವತಿಯನ್ನು ನಂಬಿಸಿ, ಆಕೆಗೆ ಮಾತ್ರ ವಿಷವುಣಿಸಿ ತಾನು ಬದುಕುಳಿಯುವ ಕಿರಾತಕ ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಸದ್ಯ ಸಾವಿನ ದವಡೆಯಿಂದ ಪವಾಡಸದೃಶವಾಗಿ ಪಾರಾಗಿ ಬಂದಿರುವ ಯುವತಿ, ಮದನ್ ರಾಜ್ ಅಸಲಿ ಮುಖವಾಡವನ್ನು ಬಯಲು ಮಾಡಿದ್ದಾಳೆ. ತನಗೆ ಮದುವೆಯ ಆಮಿಷವೊಡ್ಡಿ ಪ್ರಾಣ ತೆಗೆಯಲು ಯತ್ನಿಸಿದ ಮದನ್ ರಾಜ್ ವಿರುದ್ಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಕೊಲೆ ಯತ್ನದ ದೂರು ದಾಖಲಿಸಿದ್ದಾಳೆ.
ದೂರು ದಾಖಲಾಗುತ್ತಿದ್ದಂತೆ ಬಂಧನದ ಭೀತಿಯಲ್ಲಿರುವ ಕಾಂಗ್ರೆಸ್ ಮುಖಂಡ ಮದನ್ ರಾಜ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ಜೊತೆಗಿರುವ ಫೋಟೋಗಳನ್ನ ಬಳಸಿಕೊಂಡು ಅಧಿಕಾರದ ದರ್ಪ ತೋರಿಸುತ್ತಿದ್ದ ಈತನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಂತ್ರಸ್ತ ಯುವತಿಯ ಕಣ್ಣೀರಿಗೆ ನ್ಯಾಯ ಒದಗಿಸಬೇಕು ಮತ್ತು ಅಧಿಕಾರದ ಶ್ರೀರಕ್ಷೆ ಹೊಂದಿರುವ ಈ ‘ವಿಷಪ್ರೇಮಿ’ಯನ್ನು ಕೂಡಲೇ ಬಂಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಸದ್ಯ ಈ ಪ್ರಕರಣ ಗಣಿನಾಡು ಮಾತ್ರವಲ್ಲದೆ ಇಡೀ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.




