KOLARಮಳೆ

ಕೋಲಾರದಲ್ಲಿ ಆಲಿಕಲ್ಲು ಮಳೆಯ ರುದ್ರನರ್ತನ, ನೆಲಸಮವಾಯ್ತು ಮಾವು ಬೆಳೆ!

ಕೋಲಾರ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಆಲಿಕಲ್ಲು ಮಳೆಯ ಆರ್ಭಟಕ್ಕೆ ಮಾವು ಬೆಳೆಗಾರರು ತತ್ತರಿಸಿ ಹೋಗಿದ್ದು, ವರ್ಷವಿಡೀ ಬೆವರು ಸುರಿಸಿ ಬೆಳೆದಿದ್ದ ಫಸಲು ಕಣ್ಣಮುಂದೆಯೇ ಮಣ್ಣು ಪಾಲಾಗಿದೆ. ಶ್ರೀನಿವಾಸಪುರ ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದಾಗಿ ಮಾವಿನ ತೋಟಗಳು ಸಂಪೂರ್ಣ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಇದರಿಂದ ಕಂಗಾಲಾಗಿರುವ ರೈತರು ಅತಂತ್ರ ಸ್ಥಿತಿಯಲ್ಲಿದ್ದು, ತಮ್ಮ ಕಷ್ಟಕ್ಕೆ ಪರಿಹಾರ ಸಿಗಬಹುದೆಂಬ ಆಸೆಯಲ್ಲಿ ಕಾಯುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಕೋಲಾರ ಸಂಸದ ಮಲ್ಲೇಶ್ ಬಾಬು ಹಾಗೂ ಶ್ರೀನಿವಾಸಪುರ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ಅಧಿಕಾರಿಗಳ ತಂಡದೊಂದಿಗೆ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ತುರ್ತು ಭೇಟಿ ನೀಡಿದರು. ಆರಿಕುಂಟೆ, ದೊಡ್ಡಮೊಲದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳ ಮಾವಿನ ತೋಟಗಳಿಗೆ ತೆರಳಿದ ಜನಪ್ರತಿನಿಧಿಗಳು, ನೆಲಸಮವಾಗಿರುವ ಫಸಲನ್ನು ಕಂಡು ಮರುಗಿದರು. ಹಾನಿಯ ತೀವ್ರತೆಯನ್ನು ಹತ್ತಿರದಿಂದ ವೀಕ್ಷಿಸಿದ ಅವರು, ನೊಂದ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.

ಪರಿಶೀಲನೆಯ ನಂತರ ಮಾತನಾಡಿದ ನಾಯಕರು, ರೈತರ ಸಂಕಷ್ಟಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಬೆಳೆ ಹಾನಿಯ ಬಗ್ಗೆ ಸಮಗ್ರ ವರದಿಯನ್ನು ಸಿದ್ಧಪಡಿಸುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಶೀಘ್ರವಾಗಿ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನಕ್ಕೆ ತಂದು ಸಂತ್ರಸ್ತ ರೈತರಿಗೆ ನ್ಯಾಯ ಒದಗಿಸಲಾಗುವುದು ಎಂದು ತಿಳಿಸಿದರು. ಪ್ರಕೃತಿ ವಿಕೋಪದಿಂದ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಮಾವು ಬೆಳೆಗಾರರಿಗೆ ಶೀಘ್ರ ಸ್ಪಂದನೆಯ ಅಗತ್ಯವಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

Comments (0)

Your email address will not be published. Required fields are marked *

Back to top button