
ಬೆಳಗಾವಿ ಜಿಲ್ಲೆಯ ಕೊಂಡಸಕೊಪ್ಪ ಗ್ರಾಮದಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿಯೇ ಕುರುಬ ಸಮಾಜದ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ದೇವಸ್ಥಾನದ ಪೂಜೆ ಹಾಗೂ ಪ್ರೀತಿ-ಪ್ರೇಮದ ವಿಚಾರವನ್ನು ಮುಂದಿಟ್ಟುಕೊಂಡು ಇಡೀ ಗ್ರಾಮವೇ ಒಂದು ಕುಟುಂಬದ ವಿರುದ್ಧ ತಿರುಗಿಬಿದ್ದಿದ್ದು, ಕಳೆದ ಕೆಲವು ದಿನಗಳಿಂದ ಆ ಕುಟುಂಬದವರು ಅಘೋಷಿತ ಜೈಲು ವಾಸ ಅನುಭವಿಸುವಂತಾಗಿದೆ. ಗ್ರಾಮದ ಮುಖಂಡರ ಈ ಕಿರಾತಕ ನಿರ್ಧಾರದಿಂದಾಗಿ ಐದು ವರ್ಷದ ಹಸುಗೂಸಿನ ಜೊತೆಗೂ ಮಾತನಾಡದಂತೆ ಗ್ರಾಮಸ್ಥರಿಗೆ ಫರ್ಮಾನು ಹೊರಡಿಸಲಾಗಿದೆ.

ಈ ಸಾಮಾಜಿಕ ಬಹಿಷ್ಕಾರದ ನಿಯಮಗಳು ಅತ್ಯಂತ ಕ್ರೂರವಾಗಿದ್ದು, ಬಹಿಷ್ಕಾರಕ್ಕೆ ಒಳಗಾದ ಕುಟುಂಬದ ಜೊತೆ ಯಾರಾದರೂ ಮಾತನಾಡಿದರೆ ಅವರಿಗೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ, ಯಾರಾದರೂ ಮಾತನಾಡುತ್ತಿರುವುದನ್ನು ಗಮನಿಸಿ ಮಾಹಿತಿ ನೀಡಿದವರಿಗೆ 1,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸುವ ಮೂಲಕ ಗ್ರಾಮದಲ್ಲಿ ದ್ವೇಷದ ವಾತಾವರಣ ನಿರ್ಮಿಸಲಾಗಿದೆ. ಇದರಿಂದಾಗಿ ಮದುವೆ, ಮುಂಜಿ ಅಥವಾ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಹ್ವಾನವಿಲ್ಲದೆ ಈ ಕುಟುಂಬ ಒಂಟಿಯಾಗಿದೆ. “ನಮಗೂ ಮನುಷ್ಯರಂತೆ ಬದುಕಲು ಅವಕಾಶ ಕೊಡಿ” ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದರೂ ಗ್ರಾಮದ ಮುಖಂಡರು ಮಾತ್ರ ಊರು ಬಿಡಿಸುವುದಾಗಿ ಬಹಿರಂಗವಾಗಿ ಧಮ್ಕಿ ಹಾಕುತ್ತಿದ್ದಾರೆ.

ಈ ಅನ್ಯಾಯದ ವಿರುದ್ಧ ನೊಂದ ಕುಟುಂಬವು ಪೊಲೀಸ್ ಠಾಣೆಯ ಮೆಟ್ಟಿಲೇರಿ 15 ದಿನಗಳೇ ಕಳೆದಿದ್ದರೂ, ಈವರೆಗೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಈ ನಿರ್ಲಕ್ಷ್ಯದ ನಡುವೆಯೇ ತಡರಾತ್ರಿ ದುಷ್ಕರ್ಮಿಗಳು ನೊಂದ ಕುಟುಂಬದ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮನೆಯವರು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ. ಜನಪ್ರತಿನಿಧಿಗಳ ಕ್ಷೇತ್ರದಲ್ಲಿಯೇ ಇಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿದ್ದರೂ ಆಡಳಿತ ವ್ಯವಸ್ಥೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಕೂಡಲೇ ಈ ಕುಟುಂಬಕ್ಕೆ ರಕ್ಷಣೆ ನೀಡಿ ಸಾಮಾಜಿಕ ಬಹಿಷ್ಕಾರ ಮುಕ್ತಗೊಳಿಸಬೇಕೆಂದು ಮಾನವ ಹಕ್ಕುಗಳ ಪರ ಹೋರಾಟಗಾರರು ಆಗ್ರಹಿಸಿದ್ದಾರೆ.




