
ಕರ್ನಾಟಕ ರಾಜಕಾರಣದ ದೆಹಲಿ ಅಖಾಡದಲ್ಲಿ ಈಗ ಸಚಿವ ಸ್ಥಾನದ ಆಕಾಂಕ್ಷಿಗಳ ದಂಡೇ ಬಿಡುಬಿಟ್ಟಿದ್ದು, ಸಚಿವ ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳು ತೀವ್ರಗೊಂಡಿವೆ. ಸಚಿವ ಹೆಚ್.ಸಿ. ಮಹದೇವಪ್ಪ, ಶಾಸಕ ಹಂಪನಗೌಡ ಬಾದರ್ಲಿ, ಸಲೀಂ ಅಹ್ಮದ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರನ್ನೊಳಗೊಂಡ ಈ ಪ್ರಭಾವಿ ನಾಯಕರ ತಂಡವು ದೆಹಲಿಯಲ್ಲಿ ವಿಶೇಷ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಈ ನಾಯಕರು ಗುಪ್ತವಾಗಿ ನಡೆಸುತ್ತಿರುವ ಸರಣಿ ಸಭೆಗಳು ಕೇವಲ ಸೌಜನ್ಯದ ಭೇಟಿಯೋ ಅಥವಾ ರಾಜ್ಯದ ನಾಯಕತ್ವ ಬದಲಾವಣೆಗೆ ನಡೆಯುತ್ತಿರುವ ಬೃಹತ್ ತಂತ್ರಗಾರಿಕೆಯೋ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆಮಾಡಿದೆ.

ಈಗಾಗಲೇ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಲು ಮುಂದಾಗಿರುವ ಸಚಿವ ಮಹದೇವಪ್ಪ ಅವರು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿರುವುದು ದೆಹಲಿ ವಲಯದಲ್ಲಿ ಸುದ್ದಿಯಾಗಿದೆ. ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಅಥವಾ ಖಾತೆಗಳ ಅದಲು-ಬದಲು ಮಾಡುವ ಕುರಿತು ಇವರು ಹೈಕಮಾಂಡ್ ನಾಯಕರ ಗಮನ ಸೆಳೆದಿದ್ದಾರೆ ಎನ್ನಲಾಗುತ್ತಿದೆ. ಮಹದೇವಪ್ಪ ಅವರ ಈ ಭೇಟಿಯು ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದ್ದು, ಲಾಬಿ ನಡೆಸಲು ದೆಹಲಿಗೆ ದೌಡಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇದೇ ಹಾದಿಯಲ್ಲಿ ಇಂದು ಶಾಸಕರಾದ ಹಂಪನಗೌಡ ಬಾದರ್ಲಿ, ಸಲೀಂ ಅಹ್ಮದ್, ಅಜಯ್ ಸಿಂಗ್ ಹಾಗೂ ರಿಜ್ವಾನ್ ಅರ್ಷದ್ ಅವರನ್ನೊಳಗೊಂಡ ತಂಡವು ಹೈಕಮಾಂಡ್ ಪ್ರಮುಖ ನಾಯಕರನ್ನು ಭೇಟಿಯಾಗಲು ಕಸರತ್ತು ನಡೆಸುತ್ತಿದೆ. ಸಂಪುಟ ಪುನಾರಚನೆಯಾದಲ್ಲಿ ತಮಗೂ ಅವಕಾಶ ಸಿಗಬೇಕು ಎನ್ನುವ ಬೇಡಿಕೆಯನ್ನು ಈ ನಾಯಕರು ಹೈಕಮಾಂಡ್ ಮುಂದಿಡುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ದೆಹಲಿಯಲ್ಲಿ ಬೀಡುಬಿಟ್ಟಿರುವ ಈ ಆಕಾಂಕ್ಷಿಗಳ ಸಭೆ ಮತ್ತು ಓಡಾಟಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮೇಲೆ ಹಾಗೂ ರಾಜ್ಯ ಕಾಂಗ್ರೆಸ್ ಘಟಕದ ಮೇಲೆ ಎಂತಹ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.




