
ಗದಗ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಯು ಜಿಲ್ಲೆಯ ಹೂ ಬೆಳೆಗಾರರ ಬದುಕಿನಲ್ಲಿ ಕತ್ತಲು ಮೂಡಿಸಿದೆ. ಯುಗಾದಿ ಹಬ್ಬದ ಸಡಗರದ ಸಂದರ್ಭದಲ್ಲಿ ಹೂವುಗಳನ್ನು ಮಾರಾಟ ಮಾಡಿ ಉತ್ತಮ ಆದಾಯ ಗಳಿಸುವ ಆಸೆಯಲ್ಲಿದ್ದ ರೈತರಿಗೆ ಪ್ರಕೃತಿಯ ವಿಕೋಪವು ದೊಡ್ಡ ಆಘಾತ ನೀಡಿದೆ. ಪ್ರಮುಖವಾಗಿ ಲಕ್ಕುಂಡಿ, ಕಣವಿ, ಹೊಸೂರು, ದಂಬಳ ಹಾಗೂ ಕಡಕೋಳ ಗ್ರಾಮಗಳ ಹೂವಿನ ತೋಟಗಳು ಮಳೆಗೆ ತುತ್ತಾಗಿ ಸಂಪೂರ್ಣ ಹಾನಿಗೊಳಗಾಗಿವೆ.
ಈ ಭಾಗದ ರೈತರು ಬೆಳೆಯುವ ಹೂವುಗಳಿಗೆ ಕೇವಲ ಸ್ಥಳೀಯವಾಗಿ ಮಾತ್ರವಲ್ಲದೆ ಧಾರವಾಡ ಮತ್ತು ಬೆಳಗಾವಿಯಂತಹ ನೆರೆ ಜಿಲ್ಲೆಗಳಲ್ಲೂ ಹೆಚ್ಚಿನ ಬೇಡಿಕೆಯಿತ್ತು. ಹಬ್ಬದ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ರೈತರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಚಂಡು ಹೂ, ಸೇವಂತಿಗೆ ಮತ್ತು ಮಲ್ಲಿಗೆಯನ್ನು ಬೆಳೆಸಿದ್ದರು. ಹಲವು ರೈತರು ಈಗಾಗಲೇ ಹೊರಜಿಲ್ಲೆಗಳ ವ್ಯಾಪಾರಿಗಳಿಂದ ದೊಡ್ಡ ಮೊತ್ತದ ಆರ್ಡರ್‌ಗಳನ್ನು ಸಹ ಪಡೆದುಕೊಂಡಿದ್ದರು.
ಆದರೆ ನಾಲ್ಕು ದಿನಗಳ ಹಿಂದೆ ಸುರಿದ ಅನಿರೀಕ್ಷಿತ ಮಳೆಯು ರೈತರ ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ. ಮಳೆಯ ಹೊಡೆತಕ್ಕೆ ಸಿಲುಕಿದ ಹೂವುಗಳು ಗಿಡದಲ್ಲಿಯೇ ಕೊಳೆಯಲಾರಂಭಿಸಿದ್ದು, ಗುಣಮಟ್ಟ ಕಳೆದುಕೊಂಡಿವೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಪಾತಾಳಕ್ಕೆ ಕುಸಿದಿದೆ. ಈ ಹಿಂದೆ ಕೆಜಿಗೆ 300 ರೂಪಾಯಿಗೆ ಮಾರಾಟವಾಗುತ್ತಿದ್ದ ಮಲ್ಲಿಗೆ ಹೂವಿನ ಬೆಲೆ ಈಗ 150 ರೂಪಾಯಿಗೆ ಇಳಿಕೆಯಾಗಿದೆ. ವಾಸ್ತವವಾಗಿ ಯುಗಾದಿ ಸಮಯದಲ್ಲಿ ಇದರ ಬೆಲೆ 500 ರಿಂದ 700 ರೂಪಾಯಿವರೆಗೆ ಏರಿಕೆಯಾಗಬೇಕಿತ್ತು.
ಕೇವಲ ಮಲ್ಲಿಗೆ ಮಾತ್ರವಲ್ಲದೆ ಚಂಡು ಹೂವಿನ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸಾಮಾನ್ಯವಾಗಿ ಕೆಜಿಗೆ 350 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಚಂಡು ಹೂವಿನ ದರ ಈಗ ಕೇವಲ 100 ರೂಪಾಯಿಗೆ ಬಂದು ನಿಂತಿದೆ. ಹೂಡಿಕೆ ಮಾಡಿದ ಹಣವೂ ಕೈಗೆ ಸಿಗದಂತಾಗಿರುವುದು ಹೂ ಬೆಳೆಗಾರರನ್ನು ಕಂಗಾಲಾಗಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿರುವ ರೈತರು ಈಗ ಸರ್ಕಾರದ ಪರಿಹಾರದ ಕಡೆಗೆ ಮುಖ ಮಾಡಿದ್ದಾರೆ.




