ಬಿಸಿಲ ಬೇಗೆಗೆ ಮಳೆರಾಯನ ತಂಪು;ಐದು ದಿನಗಳ ಕಾಲ ವರುಣನ ಆರ್ಭಟ!

ದೇಶಾದ್ಯಂತ ಸುಡುತ್ತಿರುವ ಬಿಸಿಲಿನ ಬೇಗೆಯಿಂದ ಕಂಗಾಲಾಗಿರುವ ಜನರಿಗೆ ಭಾರತೀಯ ಹವಾಮಾನ ಇಲಾಖೆ ತಂಪಾದ ಸುದ್ದಿಯೊಂದನ್ನು ನೀಡಿದೆ. ಮಾರ್ಚ್ 15 ರಿಂದ 19 ರ ನಡುವೆ ದೇಶದ ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಳೆ, ಗುಡುಗು ಮತ್ತು ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದ್ದು, ಇದು ಮಳೆಯ ನಿರೀಕ್ಷೆಯಲ್ಲಿದ್ದವರಿಗೆ ತುಸು ಸಮಾಧಾನ ತಂದಿದೆ.
ವಾಯುವ್ಯ ಭಾರತದ ಮೇಲೆ ಉಂಟಾಗುತ್ತಿರುವ ಹೊಸ ಪಾಶ್ಚಿಮಾತ್ಯ ಅವಾಂತರಗಳ ಪ್ರಭಾವದಿಂದಾಗಿ ಹಿಮಾಲಯದ ತಪ್ಪಲು ಹಾಗೂ ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಹವಾಮಾನ ಬದಲಾಗಲಿದೆ.ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡಗಳಲ್ಲಿ ಮುಂದಿನ ಐದು ದಿನಗಳ ಕಾಲ ವ್ಯಾಪಕ ಮಳೆ ಮತ್ತು ಹಿಮಪಾತವಾಗುವ ನಿರೀಕ್ಷೆಯಿದೆ. ಈ ಪ್ರದೇಶಗಳಲ್ಲಿ ಗಂಟೆಗೆ 50 ರಿಂದ 70 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಪರ್ವತ ಪ್ರದೇಶಗಳಲ್ಲಿ ತಾಪಮಾನ ಗಣನೀಯವಾಗಿ ಕುಸಿಯಲಿದೆ. ಈಶಾನ್ಯ ಭಾರತದ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಮಾರ್ಚ್ 13 ರಿಂದ 19 ರ ನಡುವೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದ್ದು, ತಗ್ಗು ಪ್ರದೇಶಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಮಾರ್ಚ್ 15 ರ ಸುಮಾರಿಗೆ ಹಗುರ ಮಳೆಯಾಗುವ ಮುನ್ಸೂಚನೆ ಇದೆ. ಈ ಮಳೆಯು ತಾಪಮಾನವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಿ ಹವಾಮಾನವನ್ನು ತಂಪಾಗಿಸಲಿದೆ. ಆದರೆ, ಮಾರ್ಚ್ 16 ರಂದು ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇರುವುದರಿಂದ ರೈತರಿಗೆ ಬೆಳೆ ಹಾನಿಯ ಆತಂಕ ಎದುರಾಗಿದೆ. ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲೂ ಮಾರ್ಚ್ 15 ರಿಂದ 18 ರ ನಡುವೆ ಹವಾಮಾನದಲ್ಲಿ ಏರುಪೇರಾಗಲಿದ್ದು, ಗುಡುಗು ಸಹಿತ ಮಳೆಯಾಗಿ ಜನರಿಗೆ ಶಾಖದ ಅಲೆಗಳಿಂದ ಮುಕ್ತಿ ಸಿಗುವ ನಿರೀಕ್ಷೆಯಿದೆ.




