2028ಕ್ಕೆ ಡಿ.ಕೆ.ಶಿವಕುಮಾರ್ ಬೆಂಬಲಕ್ಕೆ ನಿಲ್ಲುತ್ತೇನೆ; ಸಿಎಂ ಹೇಳಿಕೆ ಹಿಂದಿನ ಮರ್ಮವೇನು..?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಸಿದ್ದರಾಮಯ್ಯ ಅವರ ಒಂದು ಟ್ವೀಟ್ ಭಾರಿ ಬಿರುಗಾಳಿ ಎಬ್ಬಿಸಿದೆ! ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಡಿ.ಕೆ. ಶಿವಕುಮಾರ್ ಅವರಿಗೆ ಶುಭ ಕೋರುವ ನೆಪದಲ್ಲಿ ಸಿದ್ದರಾಮಯ್ಯ ರವಾನಿಸಿದ ಸಂದೇಶ ಈಗ ‘ಕೈ’ ಪಾಳೆಯದಲ್ಲಿ ಹೊಸ ಲೆಕ್ಕಾಚಾರಕ್ಕೆ ನಾಂದಿ ಹಾಡಿದೆ. “ನನಗಿಂತ ಕಿರಿಯರಾದ ಶಿವಕುಮಾರ್ ಅವರಿಗೆ ಉಜ್ವಲ ಭವಿಷ್ಯವಿದೆ” ಎಂದು ಹೇಳುವ ಮೂಲಕ, ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಮುಂದಿನ ಚುನಾವಣೆಯ ಸಾರಥ್ಯವನ್ನು ‘ಬಂಡೆ’ಗೆ ಹಸ್ತಾಂತರಿಸಲಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಡಿಕೆಶಿ ಜೊತೆ ಇರುವುದಾಗಿ ಘೋಷಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿಯ ಸುಳ್ಳು ಕೇಸ್ ಮತ್ತು ಕಿರುಕುಳಕ್ಕೆ ಮಣಿಯದ ಡಿ.ಕೆ. ಶಿವಕುಮಾರ್ ಅವರ ರಾಜಿಯಿಲ್ಲದ ನಿಷ್ಠೆಯನ್ನು ಸಿದ್ದರಾಮಯ್ಯ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ಕೇವಲ ಅಭಿನಂದನೆಯಲ್ಲ, ಬದಲಾಗಿ ಡಿಕೆಶಿಯವರ ಸಂಘಟನಾ ಚಾತುರ್ಯಕ್ಕೆ ಸಿದ್ದರಾಮಯ್ಯ ನೀಡಿದ 'ಸರ್ಪ್ರೈಸ್ ಗಿಫ್ಟ್' ಎಂದೇ ವಿಶ್ಲೇಷಿಸಲಾಗುತ್ತಿದೆ. "ಸರ್ವಜನಾಂಗದ ಶಾಂತಿಯ ತೋಟ ಕಟ್ಟುವಲ್ಲಿ ಶಿವಕುಮಾರ್ ನನ್ನ ಹೆಗಲಿಗೆ ಹೆಗಲಾಗಿ ನಿಂತಿದ್ದಾರೆ" ಎನ್ನುವ ಮೂಲಕ, ಆಡಳಿತ ಮತ್ತು ಸಂಘಟನೆ ಎರಡರಲ್ಲೂ ಡಿಕೆಶಿಯೇ ಮುಂದಿನ ಶಕ್ತಿ ಎಂಬ ಸಂದೇಶವನ್ನು ಸಿದ್ದರಾಮಯ್ಯ ರವಾನಿಸಿದ್ದಾರೆ. ಈ ಟ್ವೀಟ್ ಮೂಲಕ ವಿರೋಧ ಪಕ್ಷಗಳಿಗೂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದಂತಾಗಿದೆ.2028ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ಹೋರಾಟದಲ್ಲಿ ತಾವು ಜೊತೆಗಿರುವುದಾಗಿ ಸಿದ್ದರಾಮಯ್ಯ ಹೇಳಿರುವುದು, ಮುಂದಿನ ಅವಧಿಗೆ ಡಿಕೆಶಿಯವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಸುಳಿವನ್ನು ನೀಡಿದಂತಿದೆ. “ನನಗಿಂತ ಕಿರಿಯವರು” ಎಂದು ಉಲ್ಲೇಖಿಸಿರುವುದು ವಯಸ್ಸಿನ ಕಾರಣ ನೀಡಿ ಸಿದ್ದರಾಮಯ್ಯ ಅವರು ಮುಂದಿನ ಬಾರಿ ಡಿಕೆಶಿಗೆ ದಾರಿ ಮಾಡಿಕೊಡಲಿದ್ದಾರೆಯೇ ಎಂಬ ಪ್ರಶ್ನೆಗೆ ಪುಷ್ಟಿ ನೀಡಿದೆ. ಅಂದರೆ ಈ ಅವಧಿಯಲ್ಲಿ ಅಧಿಕಾರ ಹಸ್ತಾಂತರಿಸುವುದಿಲ್ಲ, ಮುಂದಿನ ಚುನಾವಣೆಯಲ್ಲಿ ಬೆಂಬಲಕ್ಕೆ ನಿಲ್ಲುತ್ತೇನೆ ಎಂಬರ್ಥದಲ್ಲಿ ಸಿದ್ದರಾಮಯ್ಯ ಅವರು ಈ ರೀತಿ ಹೇಳಿದರೇ ಎಂಬ ಪ್ರಶ್ನೆ ಮೂಡಿದೆ.




