ಪತ್ನಿಗೆ 3 ಬಾರಿ ವಿಷ ಹಾಕಿದ್ರೂ ಸಾಯಲಿಲ್ಲ: ಕೊನೆಗೆ 1 ಲಕ್ಷ ಸುಪಾರಿ ನೀಡಿ ಕಾರು ಹರಿಸಿಯೇ ಬಿಟ್ಟ ಪಾಪಿ!

ಮುಂಬೈ: ಮಹಾರಾಷ್ಟ್ರದ ಬುಲ್ದಾನದಲ್ಲಿ ಮೈ ಜುಂ ಎನಿಸುವಂತಹ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಪತ್ನಿಯನ್ನು ಕೊಲ್ಲಲು ಪತಿ ಪ್ರಕಾಶ್ ಗವಾಂಡೆ ಎಂಬಾತ ನಡೆಸಿದ ಸರಣಿ ಪ್ರಯತ್ನಗಳು ಈಗ ಬಯಲಾಗಿವೆ. ತನ್ನ ಪತ್ನಿಗೆ ಬರೊಬ್ಬರಿ ಮೂರು ಬಾರಿ ವಿಷ ಹಾಕಿ ಕೊಲ್ಲಲು ಯತ್ನಿಸಿ ವಿಫಲನಾಗಿದ್ದ ಈ ಕಿರಾತಕ, ನಾಲ್ಕನೇ ಪ್ರಯತ್ನದಲ್ಲಿ ಗುತ್ತಿಗೆ ಹಂತಕರನ್ನು ನೇಮಿಸಿ ಅಪಘಾತದ ರೂಪದಲ್ಲಿ ಪತ್ನಿಯನ್ನು ಕೊಂದೇ ಬಿಟ್ಟಿದ್ದಾನೆ. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಅಪಘಾತ ಎಂದು ಬಿಂಬಿಸಲು ಸ್ಕೆಚ್: ಬಯಲಾಯ್ತು ಸುಪಾರಿ ಕಿಲ್ಲರ್ಗಳ ಅಸಲಿ ಆಟ!
ಕಳೆದ ಮಾರ್ಚ್ 2 ರಂದು ಸ್ಕೂಟರ್ನಲ್ಲಿ ಹೋಗುತ್ತಿದ್ದ ವೃಶಾಲಿ ಅವರಿಗೆ ಬಿಳಿ ಬಣ್ಣದ ಕಾರೊಂದು ಜೋರಾಗಿ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ವೃಶಾಲಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ಇದು ಸಾಮಾನ್ಯ ಅಪಘಾತದಂತೆ ಕಂಡರೂ, ಪೊಲೀಸರಿಗೆ ಕಾರಿನ ಚಲನವಲನದ ಮೇಲೆ ಅನುಮಾನ ಮೂಡಿತ್ತು. ತನಿಖೆ ತೀವ್ರಗೊಳಿಸಿದಾಗ MH 28 BB 5753 ನಂಬರಿನ ಕಾರು ಮನೀಶ್ ಸೂರ್ಯವಂಶಿ ಎಂಬಾತನಿಗೆ ಸೇರಿದ್ದು ಎಂದು ಪತ್ತೆಯಾಯಿತು. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಈ ಕೊಲೆಯ ಹಿಂದೆ ಪತಿ ಪ್ರಕಾಶ್ ರೂಪಿಸಿದ್ದ ಮಾಸ್ಟರ್ ಪ್ಲಾನ್ ಸ್ಫೋಟಗೊಂಡಿದೆ.
ಒಂದು ಲಕ್ಷ ರೂಪಾಯಿಗೆ ಪತ್ನಿಯ ಪ್ರಾಣವನ್ನೇ ತೆಗೆದ ಪತಿ: ಮೂವರು ಹಂತಕರು ಈಗ ಅಂದರ್!
ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿರುವ ಸತ್ಯವೇನೆಂದರೆ, ಪ್ರಕಾಶ್ ತನ್ನ ಪತ್ನಿಯನ್ನು ಹತ್ಯೆ ಮಾಡಲು ಮಂಗೇಶ್ ಎಂಬಾತನಿಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿದ್ದ. ಮಂಗೇಶ್ ಈ ಕೆಲಸಕ್ಕಾಗಿ ಚಾಲಕ ಸೂರ್ಯವಂಶಿಯನ್ನು ನೇಮಿಸಿಕೊಂಡಿದ್ದ. ಈಗಾಗಲೇ ಪೊಲೀಸರು ಪತಿ ಪ್ರಕಾಶ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಕೌಟುಂಬಿಕ ಕಲಹವೇ ಈ ಭೀಕರ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.




