ರಾಜ್ಯ

ಬೆಂಗಳೂರು ಹೋಟೆಲ್ ಬಿಕ್ಕಟ್ಟು: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ತುರ್ತು ಪತ್ರ!

ಬೆಂಗಳೂರು: ರಾಜಧಾನಿಯಲ್ಲಿ ಎದುರಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆಯನ್ನು ನೀಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದಿರುವ ಸಿಎಂ, ಬೆಂಗಳೂರಿನ ಹೋಟೆಲ್ ಉದ್ಯಮ ಅನುಭವಿಸುತ್ತಿರುವ ನರಕಯಾತನೆಯನ್ನು ವಿವರಿಸಿದ್ದಾರೆ. ಕೇಂದ್ರ ಸರ್ಕಾರವು ಗೃಹಬಳಕೆಯ ಸಿಲಿಂಡರ್‌ಗಳಿಗೆ ಆದ್ಯತೆ ನೀಡುತ್ತಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಗೆ ಭಾರಿ ಹೊಡೆತ ಬಿದ್ದಿದ್ದು, ಹೋಟೆಲ್‌ಗಳು ಮುಚ್ಚುವ ಭೀತಿ ಎದುರಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಲಕ್ಷಾಂತರ ಜನರ ಹೊಟ್ಟೆಯ ಮೇಲೆ ಹೊಡೆತ: ಪೂರೈಕೆ ವ್ಯತ್ಯಯದ ಭಯಾನಕ ಅಂಕಿ-ಅಂಶ ಬಿಚ್ಚಿಟ್ಟ ಸಿಎಂ!

ನಗರದ ಸಾವಿರಾರು ಹೋಟೆಲ್ ಮತ್ತು ಮೆಸ್ಸುಗಳ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಆಹಾರದ ಸಮಸ್ಯೆ ಎದುರಾಗಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಸಾಮಾನ್ಯವಾಗಿ ಐಒಸಿಎಲ್ (IOCL) ಪ್ರತಿದಿನ 500-550 ಮೆಟ್ರಿಕ್ ಟನ್, ಎಚ್‌ಪಿಸಿಎಲ್ (HPCL) 300 ಮೆಟ್ರಿಕ್ ಟನ್ ಮತ್ತು ಬಿಪಿಸಿಎಲ್ (BPCL) 230 ಮೆಟ್ರಿಕ್ ಟನ್ ಗ್ಯಾಸ್ ಪೂರೈಸುತ್ತಿದ್ದವು. ಆದರೆ ಈ ಪೂರೈಕೆ ವ್ಯವಸ್ಥೆ ದಿಢೀರ್ ಕುಸಿದಿರುವುದರಿಂದ ಕೇಟರಿಂಗ್ ಮತ್ತು ಹೋಟೆಲ್ ಉದ್ಯಮ ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿದೆ ಎಂದು ಪತ್ರದಲ್ಲಿ ಅಂಕಿ-ಅಂಶ ಸಹಿತ ಉಲ್ಲೇಖಿಸಿದ್ದಾರೆ.

ಕೇಂದ್ರದ ಮಧ್ಯಸ್ಥಿಕೆಗೆ ಆಗ್ರಹ: ಹೋಟೆಲ್ ಉದ್ಯಮ ಉಳಿಸಲು ಸಿದ್ದರಾಮಯ್ಯ ಮನವಿ!

ಒಂದು ವೇಳೆ ಈ ಗ್ಯಾಸ್ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ, ಬೆಂಗಳೂರಿನ ಜನಪ್ರಿಯ ಹೋಟೆಲ್‌ಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಸಿಎಂ ಎಚ್ಚರಿಸಿದ್ದಾರೆ. ಈ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ತೈಲ ಮಾರುಕಟ್ಟೆ ಕಂಪನಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಶೀಘ್ರವಾಗಿ ಪುನಃಸ್ಥಾಪಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಇಡೀ ನಗರದ ಆಹಾರ ಭದ್ರತೆಯ ಹಿತದೃಷ್ಟಿಯಿಂದ ಕೇಂದ್ರವು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ವಿನಂತಿಸಲಾಗಿದೆ.

Comments (0)

Your email address will not be published. Required fields are marked *

Back to top button