ರಾಜ್ಯದಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆ, ದಕ್ಷಿಣ ಕನ್ನಡಕ್ಕೆ ಎರಡು ಠಾಣೆಗಳ ಬಂಪರ್!

ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 17ನೇ ಆಯವ್ಯಯದಲ್ಲಿ ಗೃಹ ಇಲಾಖೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಜನಸಂಖ್ಯೆ ಏರಿಕೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 12 ನೂತನ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವುದಾಗಿ ಬಜೆಟ್ನಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.
ಈ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಜಿಲ್ಲೆಯ ಮಾಣಿ ಮತ್ತು ಸಜಿಪನಡುವಿನಲ್ಲಿ ಹೊಸ ಪೊಲೀಸ್ ಠಾಣೆಗಳು ಅಸ್ತಿತ್ವಕ್ಕೆ ಬರಲಿವೆ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ, ಚಿತ್ರದುರ್ಗದ ಹಿರಿಯೂರು ಹಾಗೂ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಪ್ರತ್ಯೇಕ ಸಂಚಾರ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಲಾಗಿದೆ. ಬೆಳಗಾವಿಯ ಯರಗಟ್ಟಿ, ಯಾದಗಿರಿಯ ಕಕ್ಕೇರಾ, ದಾವಣಗೆರೆಯ ಆನಗೋಡು ಮತ್ತು ಹಾವೇರಿಯ ತಿಳುವಳ್ಳಿಯಲ್ಲಿ ಹೊಸದಾಗಿ ಠಾಣೆಗಳು ತಲೆಯೆತ್ತಲಿವೆ.
ಮೈಸೂರಿನ ಉದಯಗಿರಿ ದಕ್ಷಿಣ ಮತ್ತು ವಿಜಯಪುರದ ಮುದ್ದೇಬಿಹಾಳ ಗ್ರಾಮಾಂತರ ಪ್ರದೇಶಗಳಲ್ಲೂ ಹೊಸ ಠಾಣೆಗಳ ಸ್ಥಾಪನೆಗೆ ಹಸಿರು ನಿಶಾನೆ ಸಿಕ್ಕಿದೆ. ವಿಶೇಷವಾಗಿ ಕೈಗಾರಿಕಾ ಚಟುವಟಿಕೆಗಳು ಹೆಚ್ಚಿರುವ ಕೋಲಾರದ ನರಸಾಪುರ ಕೈಗಾರಿಕಾ ವಲಯಕ್ಕೆ ಪ್ರತ್ಯೇಕ ಪೊಲೀಸ್ ಠಾಣೆಯನ್ನು ಘೋಷಿಸುವ ಮೂಲಕ ಉದ್ಯಮಿಗಳು ಮತ್ತು ಕಾರ್ಮಿಕರ ಸುರಕ್ಷತೆಗೆ ಸರ್ಕಾರ ಒತ್ತು ನೀಡಿದೆ. ಈ ಎಲ್ಲ ನೂತನ ಠಾಣೆಗಳ ಸ್ಥಾಪನೆಯಿಂದಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪೋಲಿಸ್ ಕಣ್ಗಾವಲು ಮತ್ತಷ್ಟು ಚುರುಕುಗೊಳ್ಳಲಿದ್ದು, ನಾಗರಿಕರ ಭದ್ರತೆಗೆ ಹೊಸ ಬಲ ಸಿಕ್ಕಂತಾಗಿದೆ.



