#Exclusive NewsTop Newsಜಿಲ್ಲೆರಾಜ್ಯಸುದ್ದಿ

ಬ್ರ್ಯಾಂಡ್ ಬೆಂಗಳೂರಿಗೆ ಸಿದ್ದು ಗಿಫ್ಟ್; ನಗರದಾದ್ಯಂತ ವೈಟ್ ಟಾಪಿಂಗ್ ಕ್ರಾಂತಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಅಭೂತಪೂರ್ವ ಆದ್ಯತೆ ನೀಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಸರ್ಕಾರ 7,000 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಘೋಷಿಸಿದೆ. ಸಂಚಾರ ದಟ್ಟಣೆ ನಿವಾರಣೆ, ರಸ್ತೆಗಳ ಮೇಲ್ದರ್ಜೆ ಮತ್ತು ಪರಿಸರ ಸಂರಕ್ಷಣೆಯೇ ಈ ಯೋಜನೆಯ ಮೂಲ ಮಂತ್ರವಾಗಿದೆ.

ನಗರದ ರಸ್ತೆಗಳನ್ನು ಗುಂಡಿಮುಕ್ತವಾಗಿಸಲು 1,700 ಕೋಟಿ ರೂಪಾಯಿ ವೆಚ್ಚದಲ್ಲಿ 158 ಕಿಲೋಮೀಟರ್ ಉದ್ದದ ರಸ್ತೆಗಳಿಗೆ ವೈಟ್ ಟಾಪಿಂಗ್ ಮಾಡಲು ನಿರ್ಧರಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಒಟ್ಟು 450 ಕಿ.ಮೀ ರಸ್ತೆಯನ್ನು ವೈಟ್ ಟಾಪಿಂಗ್ ವ್ಯಾಪ್ತಿಗೆ ತರಲು ₹3,000 ಕೋಟಿ ಮೀಸಲಿಡಲಾಗಿದೆ. ಅಲ್ಲದೆ, ನಗರದ ಐದು ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದ ರಸ್ತೆಗಳ ಅಭಿವೃದ್ಧಿಗೆ ₹1,233 ಕೋಟಿ ಹಾಗೂ ಸಂಚಾರ ದಟ್ಟಣೆ ಹೆಚ್ಚಿರುವ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗಿನ ಹೊರವರ್ತುಲ ರಸ್ತೆ ಅಭಿವೃದ್ಧಿಗೆ ₹450 ಕೋಟಿ ಅನುದಾನ ನೀಡಲಾಗಿದೆ.

ಪಾದಚಾರಿ ಸುರಕ್ಷತೆ ಮತ್ತು ನಗರ ಸೌಂದರ್ಯ:
ನಗರದ ಸೌಂದರ್ಯೀಕರಣದ ಭಾಗವಾಗಿ 175 ಪ್ರಮುಖ ಜಂಕ್ಷನ್‌ಗಳನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಪಾದಚಾರಿಗಳ ಸುರಕ್ಷತೆಗಾಗಿ 500 ಕಿಲೋಮೀಟರ್ ಉದ್ದದ ಫುಟ್‌ಪಾತ್‌ಗಳ ನವೀಕರಣ ಮತ್ತು ಸಂಚಾರ ಸುಗಮಗೊಳಿಸಲು 100 ಹೊಸ ಸ್ಕೈವಾಕ್‌ಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಸಿರು ನಿಶಾನೆ ಸಿಕ್ಕಿದೆ. ರಾಜಕಾಲುವೆಗಳ ನವೀಕರಣ ಮತ್ತು ಕೆರೆಗಳ ಪುನಶ್ಚೇತನಕ್ಕಾಗಿ ₹273 ಕೋಟಿ ಮೀಸಲಿರಿಸುವ ಮೂಲಕ ಜಲಮೂಲಗಳ ರಕ್ಷಣೆಗೆ ಸರ್ಕಾರ ಮುಂದಾಗಿದೆ.

ಬೆಂಗಳೂರು ಹೊರವಲಯದಲ್ಲಿ ಕಾಣಿಸಿಕೊಳ್ಳುವ ಚಿರತೆಗಳ ಹಾವಳಿ ತಡೆಗಟ್ಟಲು ಮತ್ತು ಅವುಗಳ ರಕ್ಷಣೆಗಾಗಿ ಬನ್ನೇರುಘಟ್ಟದಲ್ಲಿ ₹5 ಕೋಟಿ ವೆಚ್ಚದಲ್ಲಿ ಚಿರತೆ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗುತ್ತಿದೆ. ಜೊತೆಗೆ, ಮಾದಪ್ಪನಹಳ್ಳಿಯ 153 ಎಕರೆ ಪ್ರದೇಶದಲ್ಲಿ ಸಾಂಸ್ಕೃತಿಕ ನಾಯಕ ‘ಬಸವಣ್ಣ ಜೈವಿಕ ಉದ್ಯಾನ’ ನಿರ್ಮಿಸುವ ಮೂಲಕ ನಗರಕ್ಕೆ ಹೊಸ ಸಾಂಸ್ಕೃತಿಕ ಆಯಾಮ ನೀಡಲು ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿದೆ.

Comments (0)

Your email address will not be published. Required fields are marked *

Back to top button