
ಬೆಂಗಳೂರು: ಜೆಪಿ ಭವನದಲ್ಲಿ ನಡೆದ ಜೆಡಿಎಸ್ ಪಕ್ಷದ ಮಹತ್ವದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೀಸಲಾತಿ ವಿಚಾರವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಲೂರು ಕ್ಷೇತ್ರದ ಹಿರಿಯ ಮುಖಂಡ ಹೂಡಿ ವಿಜಯಕುಮಾರ್ ‘ಸ್ವಾಭಿಮಾನಿ ಜನತಾ ಪಕ್ಷ’ವನ್ನು ಜೆಡಿಎಸ್ನಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ಒಳ ಮೀಸಲಾತಿ ಜಾರಿಗೊಳಿಸುವ ವಿಷಯದಲ್ಲಿ ಸಿದ್ದರಾಮಯ್ಯ ಪಲಾಯನವಾದ ಮಾಡುತ್ತಿದ್ದಾರೆ, ಎಂಟು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ, ಅಹಿಂದ ನಾಯಕ ಎಂದು ಕರೆಸಿಕೊಳ್ಳುವ ಇವರಿಂದ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರಿಗೆ ಕೇವಲ ಚುನಾವಣೆ ಬಂದಾಗ ಅಥವಾ ರಾಜಕೀಯ ಸಂಕಷ್ಟ ಎದುರಾದಾಗ ಮಾತ್ರ ಅಹಿಂದ ವರ್ಗಗಳು ನೆನಪಾಗುತ್ತವೆ, ಅಧಿಕಾರ ಸಿಕ್ಕ ನಂತರ ಸಾಮಾಜಿಕ ನ್ಯಾಯದ ಮಾತುಗಳೇ ಮರೆತುಹೋಗುತ್ತವೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ನಿಜವಾದ ಸಾಮಾಜಿಕ ನ್ಯಾಯವನ್ನು ಜಾರಿಗೆ ತಂದವರು ಹೆಚ್.ಡಿ. ದೇವೇಗೌಡರು ಮಾತ್ರ , ತಳಮಟ್ಟದ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿ ವಿಧಾನಸಭೆ ಮತ್ತು ಸರ್ಕಾರಿ ಕೆಲಸಗಳಲ್ಲಿ ಅವಕಾಶ ನೀಡಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ, ಕಳೆದ ಹತ್ತು ವರ್ಷಗಳಲ್ಲಿ ಯಾವ ಯಾವ ಸಮುದಾಯಗಳು ಎಷ್ಟು ಪ್ರಮಾಣದ ಮೀಸಲಾತಿ ಸೌಲಭ್ಯ ಪಡೆದಿವೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿ ಆ ಪಟ್ಟಿ ಹೊರಬಿದ್ದರೆ ಮುಖ್ಯಮಂತ್ರಿಯ ಅಸಲಿ ಬಣ್ಣ ಬಯಲಾಗುತ್ತದೆ ಎಂದು ಅವರು ಗುಡುಗಿದರು.
ರಾಜ್ಯ ಸಂಪುಟದಲ್ಲಿ ಒಳ ಮೀಸಲಾತಿ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ಸಂಪುಟದ ಒಳಗೆ ಸಚಿವರೇ ಎರಡು ಮೂರು ಗುಂಪುಗಳಾಗಿ ವಿಭಜನೆಯಾಗಿರುವುದು ಆರೋಗ್ಯಕರ ಬೆಳವಣಿಗೆಯಲ್ಲ, ಮೀಸಲಾತಿ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಮತ್ತು ಅಪನಂಬಿಕೆ ಸೃಷ್ಟಿಸುವ ಕೆಲಸ ನಡೆಯುತ್ತಿದೆ, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು . ಪ್ರಾಮಾಣಿಕವಾಗಿ ಕೆಲಸ ಮಾಡುವ ಸರ್ಕಾರಕ್ಕೆ ಐದು ವರ್ಷಗಳ ಕಾಲ ಅವಕಾಶ ನೀಡಿದರೆ, ಈಗ ಆಗಿರುವ ಎಲ್ಲಾ ಅನ್ಯಾಯಗಳನ್ನು ಸರಿಪಡಿಸುವುದಾಗಿ ಜನತೆಗೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಮತ್ತು ಸಂಸದ ಮಲ್ಲೇಶ್ ಬಾಬು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಹೂಡಿ ವಿಜಯಕುಮಾರ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಹೂಡಿ ವಿಜಯಕುಮಾರ್ ಅವರೊಂದಿಗೆ ಅವರ ಪಕ್ಷದ ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಯಾಗಿದ್ದು, ಕೋಲಾರ ಜಿಲ್ಲೆಯಲ್ಲಿ ಪಕ್ಷದ ಬಲವರ್ಧನೆಗೆ ನಾಂದಿ ಹಾಡಿದೆ. #JDS




