Top Newsಜಿಲ್ಲೆರಾಜಕೀಯರಾಜ್ಯವೈರಲ್ ನ್ಯೂಸ್ಸುದ್ದಿ

ಕೊಚ್ಚೆ ನೀರು ಹರಿಸಿದ ಭೂಪರು: ಸಿಎಂ ವಿರುದ್ಧ ದೇವೇಗೌಡರ ಗುಡುಗು!

ಬೆಂಗಳೂರು: ಜೆಡಿಎಸ್ ಪಕ್ಷದ ಮಹತ್ವದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮಾಲೂರು ವಿಧಾನಸಭಾ ಕ್ಷೇತ್ರದ ಪ್ರಬಲ ಮುಖಂಡ ಹೂಡಿ ವಿಜಯಕುಮಾರ್ ಅವರ ‘ಸ್ವಾಭಿಮಾನಿ ಜನತಾ ಪಕ್ಷ’ವನ್ನು ಜೆಡಿಎಸ್‌ನಲ್ಲಿ ವಿಲೀನಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿಯನ್ನು ತೀವ್ರವಾಗಿ ಟೀಕಿಸಿದರು. ಹದಿನಾರು ಬಜೆಟ್ ಮಂಡಿಸಿರುವ ಅನುಭವ ಇರುವುವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನದಿಯ ಶುದ್ಧ ನೀರು ಕೊಡುವ ಬದಲು ಬೆಂಗಳೂರಿನ ಕೊಳಚೆ ನೀರನ್ನು ಹರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಲಾರದ ಪ್ರಸಿದ್ಧ ಟೊಮ್ಯಾಟೊ ಬೆಳೆಯ ಮೇಲೆ ಈ ಕೊಳಚೆ ನೀರು ಬೀರುತ್ತಿರುವ ದುಷ್ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ದೇವೇಗೌಡರು, ಈಗ ಕೋಲಾರದ ಟೊಮ್ಯಾಟೊ ತಿನ್ನಬೇಡಿ ಎಂದು ಜನರು ಹೇಳುವಂತಾಗಿದೆ, ಇದಕ್ಕೆ ಕಾಂಗ್ರೆಸ್ ಸರ್ಕಾರದ ಅವಿವೇಕದ ನಿರ್ಧಾರಗಳೇ ಕಾರಣ, ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಬೊಕ್ಕಸ ಖಾಲಿಯಾಗಿದ್ದರೂ ಹೇಗೆ ಆಡಳಿತ ನಡೆಸಿದ್ದೆ ಎಂಬ ಹಳೆಯ ದಿನಗಳನ್ನು ಸ್ಮರಿಸಿದ ಅವರು, ಅಂದಿನ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಅವರಿಗೆ ಇದೆಲ್ಲವೂ ತಿಳಿದಿದೆ ಧರ್ಮಸಿಂಗ್ ಅವರ ಕಾಲದಲ್ಲಿ ಅಬಕಾರಿ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಮುನಿಸಿಕೊಂಡಿದ್ದ ವಿಚಾರವನ್ನು ಪ್ರಸ್ತಾಪಿಸಿ ಟೀಕಾ ಪ್ರಹಾರ ನಡೆಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರು ಘೋಷಿಸಿದ್ದ ‘ಪಂಚರತ್ನ’ ಯೋಜನೆಗಳು ಜನಪರವಾಗಿದ್ದವು, ಆದರೆ ಕಾಂಗ್ರೆಸ್‌ನ ಉಚಿತ ಗ್ಯಾರಂಟಿಗಳಿಗೆ ಜನರು ಮಾರುಹೋದರು ,ಈಗ ಅದೇ ಗ್ಯಾರಂಟಿಗಳು ಬೊಕ್ಕಸಕ್ಕೆ ಹೊರೆಯಾಗುತ್ತಿವೆ ಎಂದು ಸರ್ಕಾರವೇ ಬೊಬ್ಬೆ ಹಾಕುತ್ತಿದೆ , ಗ್ಯಾರಂಟಿಗಳ ಅಬ್ಬರದ ನಡುವೆಯೂ ಜೆಡಿಎಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಲಾಗುವುದು ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿಗಳು, ನಾವು ಪ್ರಸ್ತುತ ಎನ್‌ಡಿಎ (NDA) ಮೈತ್ರಿಯಲ್ಲಿದ್ದು, ಈ ಮೈತ್ರಿಯನ್ನು ಪ್ರಾಮಾಣಿಕವಾಗಿ ಉಳಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಮೈತ್ರಿ ಧರ್ಮ ಪಾಲನೆಯ ಜೊತೆಗೆ ಪಕ್ಷದ ಸಂಘಟನೆಯನ್ನೂ ಬಲಪಡಿಸಲಾಗುವುದು, ಅದಕ್ಕೆ ಮಾಲೂರು ಮುಖಂಡರ ಈ ಸೇರ್ಪಡೆಯೇ ಮೊದಲ ಹೆಜ್ಜೆ ,ಹೂಡಿ ವಿಜಯಕುಮಾರ್ ಅವರ ಸೇರ್ಪಡೆಯಿಂದ ಕೋಲಾರ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ವೃದ್ಧಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Comments (0)

Your email address will not be published. Required fields are marked *

Back to top button