
ಕಲಬುರಗಿ: ಜಿಲ್ಲೆಯ ರೈತರ ಪಾಲಿಗೆ ತೊಗರಿ ಬರಿ ಬೆಳೆಯಲ್ಲ, ಅದು ಅವರ ಬದುಕಿನ ಜೀವನಾಡಿ. ಆದರೆ ಈ ಬಾರಿ ಹವಾಮಾನ ವೈಪರೀತ್ಯ ಮತ್ತು ನೆರೆಯ ಅಬ್ಬರದಿಂದಾಗಿ ಜಿಲ್ಲೆಯ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಳೆ ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಸರ್ಕಾರವು ತೊಗರಿ ನಾಡಿನ ರೈತರ ಈ ಸಂಕಷ್ಟಕ್ಕೆ ಸ್ಪಂದಿಸಲಿದೆಯೇ ಎಂಬ ಭಾರೀ ನಿರೀಕ್ಷೆ ಈಗ ಜಿಲ್ಲೆಯಾದ್ಯಂತ ಮನೆಮಾಡಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಜೊತೆಗೆ ಕೃಷಿ ವಲಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬುದು ಇಲ್ಲಿನ ನಿವಾಸಿಗಳ ಪ್ರಬಲ ಬೇಡಿಕೆಯಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಸುರಿದ ಅಕಾಲಿಕ ಮಳೆ ಮತ್ತು ನೆರೆಯಿಂದಾಗಿ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ರೈತರು ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಸ್ಥಿತಿಯಲ್ಲಿದ್ದಾರೆ. ನೆರೆಯ ಹೊಡೆತಕ್ಕೆ ಸಿಲುಕಿ ತತ್ತರಿಸಿರುವ ಬೆಳೆಗಾರರಿಗೆ ಮಾರುಕಟ್ಟೆಯಲ್ಲಿ ಸರಿಯಾದ ದರ ಸಿಗದೆ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ದರ ಕುಸಿತದಿಂದಾಗಿ ಕಂಗಾಲಾಗಿರುವ ರೈತರು ಸರ್ಕಾರದ ಕಡೆಗೆ ಆಶಾಭಾವನೆಯಿಂದ ನೋಡುತ್ತಿದ್ದಾರೆ.

ಸರ್ಕಾರದ ವಿಳಂಬ ಧೋರಣೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳೆ ಹಾನಿಯಿಂದ ನಷ್ಟ ಅನುಭವಿಸಿರುವ ರೈತರಿಗೆ ತಕ್ಷಣವೇ ಪರಿಹಾರ ವಿತರಿಸಬೇಕು ಮತ್ತು ಮಾರುಕಟ್ಟೆ ಚೇತರಿಕೆಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕೇವಲ ಬೆಂಬಲ ಬೆಲೆ ಘೋಷಿಸಿದರೆ ಸಾಲದು, ಅದನ್ನು ಸಮರ್ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವ ನೀರಾವರಿ ಯೋಜನೆಗಳ ಪೂರ್ಣಗೊಳಿಸುವಿಕೆ ಮತ್ತು ತೊಗರಿ ಸಂಸ್ಕರಣಾ ಘಟಕಗಳಿಗೆ ಉತ್ತೇಜನ ನೀಡುವಂತಹ ನಿರ್ಧಾರಗಳನ್ನು ಮುಖ್ಯಮಂತ್ರಿಗಳು ತಮ್ಮ ಬಜೆಟ್‌ನಲ್ಲಿ ಪ್ರಕಟಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಉತ್ತರ ಕರ್ನಾಟಕದ ಈ ಭಾಗದ ಆರ್ಥಿಕತೆಯು ಸಂಪೂರ್ಣವಾಗಿ ಕೃಷಿಯ ಮೇಲೆ ಅವಲಂಬಿತವಾಗಿರುವುದರಿಂದ, ನಾಳೆಯ ಬಜೆಟ್ ರೈತರ ಪಾಲಿಗೆ “ಸಂಜೀವಿನಿ”ಯಾಗಲಿ ಎಂಬುದು ಎಲ್ಲರ ಆಶಯವಾಗಿದೆ.




