ಫೋನ್ ಟ್ಯಾಪಿಂಗ್ ಆರೋಪಕ್ಕೆ ಕಾಂಗ್ರೆಸ್ ಗರಂ; ಹೆಚ್‌ಡಿಕೆಗೆ ‘ಹಿಟ್ ಅಂಡ್ ರನ್’ ಪಾಠ ಹೇಳಿಕೊಟ್ಟ ಪರಮೇಶ್ವರ್!

ರಾಜ್ಯ ರಾಜಕಾರಣದಲ್ಲಿ ಈಗ ಫೋನ್ ಕದ್ದಾಲಿಕೆ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪಗಳಿಗೆ ಕಾಂಗ್ರೆಸ್ ಘಟಕ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು, ದಾಖಲೆಗಳಿದ್ದರೆ ಬಹಿರಂಗಪಡಿಸಿ ಎಂದು ಕಾಂಗ್ರೆಸ್ ಸವಾಲು ಹಾಕಿದೆ. ಚರ್ಚೆಗೆ ಬಾರದೆ ಕೇವಲ ‘ಹಿಟ್ ಅಂಡ್ ರನ್’ ತಂತ್ರ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ತನ್ನ ಎಕ್ಸ್ ಖಾತೆಯ ಮೂಲಕ ಕಿಡಿಕಾರಿದೆ.
ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೆಚ್‌ಡಿಕೆ ಮತ್ತು ಬಿಜೆಪಿಯ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಸರ್ಕಾರ ಯಾವುದೇ ವ್ಯಕ್ತಿಯ ಫೋನ್ ಟ್ಯಾಪಿಂಗ್ ಮಾಡುತ್ತಿಲ್ಲ. ಇಂತಹ ಆಧಾರರಹಿತ ಆರೋಪಗಳನ್ನು ಮಾಡುವುದು ವಿಪಕ್ಷ ನಾಯಕರಿಗೆ ಶೋಭೆ ತರುವುದಿಲ್ಲ” ಎಂದು ಒಂದು ವೇಳೆ ಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ಬಗ್ಗೆ ಭದ್ರವಾದ ದಾಖಲೆಗಳಿದ್ದರೆ ಅದನ್ನು ಸರ್ಕಾರಕ್ಕೆ ನೀಡಲಿ, ತನಿಖೆ ಮಾಡೋಣ ಎಂದು ಸವಾಲು ಹಾಕಿದ್ದಾರೆ.
ವಿಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಇಂತಹ ಗಂಭೀರ ಆರೋಪಗಳನ್ನು ಮಾಡುತ್ತಿವೆ ಎಂಬುದು ಸರ್ಕಾರದ ವಾದ. ಸಚಿವರಾಗಿ ನೀವು ಎಷ್ಟು ಕಾರ್ಯನಿರತರಾಗಿದ್ದೀರಿ ಎಂಬುದು ಜನತೆಗೆ ತಿಳಿದಿದೆ, ಮೊದಲು ಆಡಳಿತದ ಕಡೆ ಗಮನಹರಿಸಿ ಎಂದು ಕಾಂಗ್ರೆಸ್ ಕುಮಾರಸ್ವಾಮಿ ಅವರಿಗೆ ಕುಟುಕಿದೆ. ಈ ಫೋನ್ ಟ್ಯಾಪಿಂಗ್ ವಿವಾದವು ಈಗ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದ್ದು, ಸದನದಲ್ಲೂ ಈ ಕುರಿತು ಬಿಸಿಬಿಸಿ ಚರ್ಚೆ ನಡೆಯುವ ಲಕ್ಷಣಗಳು ಕಾಣುತ್ತಿವೆ.




