
ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತದ ಸ್ಫೋಟಗೊಂಡಿದ್ದು, ಈ ಬಾರಿ ದಾವಣಗೆರೆ ಜಿಲ್ಲಾ ರಾಜಕಾರಣದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಡೆಗೆ ಸ್ವಪಕ್ಷದ ನಾಯಕರೇ ತಿರುಗಿಬಿದ್ದಿದ್ದಾರೆ. ದಾವಣಗೆರೆ ಜಿಲ್ಲೆಯ 7 ಕ್ಷೇತ್ರಗಳಿಗೆ ಬಿಎಸ್ವೈ ಅವರು ಏಕಪಕ್ಷೀಯವಾಗಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿರುವುದು ಈಗ ರಾಜ್ಯ ರಾಜಕೀಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ. ಹಾಲಿ ಶಾಸಕರಿರುವ ಕ್ಷೇತ್ರಗಳಿಗೂ ಬದಲಿ ಅಭ್ಯರ್ಥಿಗಳ ಹೆಸರನ್ನು ಸೂಚಿಸಿರುವುದು ಅತೃಪ್ತರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.
ಬಿಎಸ್ವೈ ಅವರ ಈ ಅನಿರೀಕ್ಷಿತ ನಡೆಯನ್ನು ಖಂಡಿಸಿ ದಾವಣಗೆರೆಯ ರೆಬೆಲ್ ನಾಯಕರು ಇಂದು ಮಹತ್ವದ ಸಭೆ ನಡೆಸಿದ್ದಾರೆ. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಶಾಸಕ ಬಿ.ಪಿ. ಹರೀಶ್ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲೆಯ ಹಲವು ಅತೃಪ್ತ ಮುಖಂಡರು ಭಾಗವಹಿಸಿದ್ದರು. ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳ ಬಾಕಿ ಇರುವಾಗಲೇ ಹೈಕಮಾಂಡ್ ಗಮನಕ್ಕೆ ತಾರದೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಸರಿಯಲ್ಲ ಎಂಬ ಒಕ್ಕೊರಲ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ.
ಯಡಿಯೂರಪ್ಪ ಅವರ ಏಕಪಕ್ಷೀಯ ತೀರ್ಮಾನದ ವಿರುದ್ಧ ಕೇಂದ್ರ ನಾಯಕರಿಗೆ ದೂರು ನೀಡಲು ಅತೃಪ್ತ ಬಣ ನಿರ್ಧರಿಸಿದೆ. ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಿ ಈ ಘೋಷಣೆಯನ್ನು ಹಿಂಪಡೆಯುವಂತೆ ಮಾಡಲು ಸಭೆಯಲ್ಲಿ ತಂತ್ರ ರೂಪಿಸಲಾಗಿದೆ. ದಾವಣಗೆರೆ ಜಿಲ್ಲಾ ಬಿಜೆಪಿಯಲ್ಲಿ ಉಂಟಾಗಿರುವ ಈ ಬಿರುಕು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಒಟ್ಟಿನಲ್ಲಿ ಬಜೆಟ್ ಅಧಿವೇಶನದ ಬೆನ್ನಲ್ಲೇ ಬಿಜೆಪಿಯೊಳಗಿನ ಈ ಆಂತರಿಕ ಕಚ್ಚಾಟ ವಿರೋಧ ಪಕ್ಷಗಳಿಗೆ ಆಹಾರವಾಗುವ ಸಾಧ್ಯತೆ ದಟ್ಟವಾಗಿದೆ. ಯಡಿಯೂರಪ್ಪ ಅವರ ಪವರ್ಫುಲ್ ನಡೆಗೆ ಹೈಕಮಾಂಡ್ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.




