
ಬೆಂಗಳೂರು: ಎಚ್.ಎಸ್.ಆರ್ ಲೇಔಟ್ ವ್ಯಾಪ್ತಿಯ ಎಳ್ಳುಕುಂಟೆಯಲ್ಲಿ ನಿಧಿ ಚೋರರು ತಮ್ಮ ಕೈಚಳಕ ತೋರಿದ್ದು, ಪುರಾತನ ದೇವಾಲಯದ ಆವರಣದಲ್ಲಿ ನಿಧಿಗಾಗಿ ಗುಂಡಿ ತೋಡಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹಲವು ವರ್ಷಗಳ ಇತಿಹಾಸವಿರುವ ಈ ದೇವಾಲಯದ ಆವರಣದಲ್ಲಿ ನಿಧಿ ಇದೆ ಎಂಬ ನಂಬಿಕೆಯಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ದೇವಾಲಯಕ್ಕೆ ತೀರಾ ಹತ್ತಿರದಲ್ಲಿರುವ ಅಪಾರ್ಟ್‌ಮೆಂಟ್ ಒಂದರ ಕೆಳಭಾಗದ ಜಾಗವನ್ನು ಗುರಿಯಾಗಿಸಿಕೊಂಡು ಈ ಕಳ್ಳತನದ ಪ್ರಯತ್ನ ನಡೆದಿದೆ.
ವಿಶೇಷವೆಂದರೆ, ನಿಧಿ ಅನ್ವೇಷಣೆಗಾಗಿ ಕಿಡಿಗೇಡಿಗಳು ಕೇವಲ ಗುಂಡಿ ತೋಡುವುದು ಮಾತ್ರವಲ್ಲದೆ, ಆ ಜಾಗದಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಿರುವುದು ಪತ್ತೆಯಾಗಿದೆ. ಸುಮಾರು 5 ಅಡಿಗೂ ಹೆಚ್ಚು ಆಳದ ಗುಂಡಿ ತೋಡಿರುವ ಕುರುಹುಗಳು ಕಂಡುಬಂದಿದ್ದು, ನಿಧಿ ಸಿಗಲೆಂದು ವಾಮಾಚಾರದಂತಹ ಕೃತ್ಯಗಳಿಗೆ ಮೊರೆ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬೆಳಿಗ್ಗೆ ದೇವಾಲಯದ ಆವರಣದಲ್ಲಿ ಗುಂಡಿ ಪತ್ತೆಯಾದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಎಚ್.ಎಸ್.ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನ ಮತ್ತು ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದು, ನಿಧಿ ಚೋರರ ಪತ್ತೆಗೆ ಬಲೆ ಬೀಸಿದ್ದಾರೆ. ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವಿರುವ ಜಾಗದಲ್ಲಿ ಇಂತಹ ಘಟನೆ ನಡೆದಿರುವುದು ಸಿಲಿಕಾನ್ ಸಿಟಿಯ ಜನರನ್ನು ಬೆಚ್ಚಿಬೀಳಿಸಿದೆ.




