Top Newsದೇಶ/ವಿದೇಶಸುದ್ದಿ

8 ದೇಶಗಳ ನಾಯಕರೊಂದಿಗೆ ಪ್ರಧಾನಿ ಮೋದಿ ‘ಮೆಗಾ’ ಫೋನ್ ಸಂವಾದ!

ಮಧ್ಯಪ್ರಾಚ್ಯದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಸಂಘರ್ಷವು ಜಾಗತಿಕ ಮಟ್ಟದಲ್ಲಿ ತಲ್ಲಣ ಮೂಡಿಸಿದ್ದು, ಈ ಬಿಕ್ಕಟ್ಟಿನ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರಾಜತಾಂತ್ರಿಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ 48 ಗಂಟೆಗಳಲ್ಲಿ ಪ್ರಧಾನಿ ಮೋದಿ ಅವರು ಓಮನ್, ಕತಾರ್, ಕುವೈತ್, ಯುಎಇ, ಸೌದಿ ಅರೇಬಿಯಾ, ಜೋರ್ಡಾನ್, ಬಹ್ರೇನ್ ಮತ್ತು ಇಸ್ರೇಲ್ ಸೇರಿದಂತೆ ಒಟ್ಟು 8 ದೇಶಗಳ ಮುಖ್ಯಸ್ಥರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ವಿಶೇಷವಾಗಿ ರಂಜಾನ್ ಪವಿತ್ರ ಮಾಸದಲ್ಲೇ ಸಂಘರ್ಷ ತೀವ್ರಗೊಂಡಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದು, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿ ಮರುಸ್ಥಾಪಿಸಲು ಕರೆ ನೀಡಿದ್ದಾರೆ.

ಇರಾನ್‌ನಿಂದ ಈ ರಾಷ್ಟ್ರಗಳ ಮೇಲೆ ನಡೆದ ದಾಳಿಗಳನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಓಮನ್, ಕುವೈತ್ ಮತ್ತು ಕತಾರ್ ದೇಶಗಳ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯನ್ನು ಭಾರತವು ಬಲವಾಗಿ ವಿರೋಧಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸೌದಿ ಅರೇಬಿಯಾದ ತೈಲ ಸಂಸ್ಕರಣಾಗಾರಗಳು ಮತ್ತು ಯುಎಇ ಮೇಲಿನ ದಾಳಿಗಳ ಕುರಿತು ಆಯಾ ದೇಶಗಳ ರಾಜಕುಮಾರರು ಹಾಗೂ ಅಧ್ಯಕ್ಷರೊಂದಿಗೆ ಚರ್ಚಿಸಿದ ಮೋದಿ, ಭಾರತವು ಈ ಸಂಕಷ್ಟದ ಸಮಯದಲ್ಲಿ ಅವರೊಂದಿಗೆ ದೃಢವಾಗಿ ನಿಲ್ಲಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ.

ಈ ಇಡೀ ರಾಜತಾಂತ್ರಿಕ ಸಂವಾದದ ಮುಖ್ಯ ಉದ್ದೇಶ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಸುಮಾರು ಒಂದು ಕೋಟಿಗೂ ಅಧಿಕ ಭಾರತೀಯರ ಸುರಕ್ಷತೆಯಾಗಿದೆ. ಯುದ್ಧ ಪೀಡಿತ ದೇಶಗಳಲ್ಲಿರುವ ಭಾರತೀಯ ಸಮುದಾಯದ ಕ್ಷೇಮ ಮತ್ತು ಭದ್ರತೆಯ ಬಗ್ಗೆ ಮೋದಿ ಅವರು ಆಯಾ ದೇಶಗಳ ಮುಖ್ಯಸ್ಥರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಂಘರ್ಷದ ಪರಿಸ್ಥಿತಿಯಲ್ಲೂ ಭಾರತೀಯರ ಬಗ್ಗೆ ಕಾಳಜಿ ವಹಿಸುತ್ತಿರುವ ಅರಬ್ ರಾಷ್ಟ್ರಗಳ ನಾಯಕರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಪೂರೈಕೆ ಮತ್ತು ಆರ್ಥಿಕ ಸ್ಥಿರತೆಯ ದೃಷ್ಟಿಯಿಂದ ಈ ಪ್ರದೇಶದಲ್ಲಿ ಶಾಂತಿ ನೆಲೆಸುವುದು ಅತ್ಯಗತ್ಯ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.

Comments (0)

Your email address will not be published. Required fields are marked *

Back to top button