
ರಾಜ್ಯ ಬಿಜೆಪಿಯ ಆಂತರಿಕ ವಲಯದಲ್ಲಿ ‘ಫೋಟೋ ರಾಜಕೀಯ’ ದೊಡ್ಡ ಮಟ್ಟದ ಸಂಚಲನ ಮೂಡಿಸಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ವಿಷಯವನ್ನು ಕೋರ್ ಕಮಿಟಿ ಸಭೆಯಲ್ಲಿ ಗಂಭೀರವಾಗಿ ಪ್ರಸ್ತಾಪಿಸಲು ಸಜ್ಜಾಗಿದ್ದಾರೆ. ಧಾರವಾಡದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಭಾವಚಿತ್ರ ನಾಪತ್ತೆಯಾಗಿರುವುದು ಪಕ್ಷದೊಳಗೆ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಈ ಘಟನೆಯು ಕೇವಲ ಆಕಸ್ಮಿಕವಲ್ಲ, ಬದಲಿಗೆ ಉದ್ದೇಶಪೂರ್ವಕವಾಗಿ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ವಿಜಯೇಂದ್ರ ಈ ಬಗ್ಗೆ ಉತ್ತರ ನೀಡುವಂತೆ ಪಟ್ಟು ಹಿಡಿಯಲು ನಿರ್ಧರಿಸಿದ್ದಾರೆ.
ಅರವಿಂದ ಬೆಲ್ಲದ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಂತಹ ಘಟಾನುಘಟಿ ನಾಯಕರು ಭಾಗವಹಿಸಿದ್ದರು. ಇಂತಹ ಪ್ರಮುಖ ವೇದಿಕೆಯಲ್ಲಿ ಸ್ವತಃ ಪಕ್ಷದ ರಾಜ್ಯಾಧ್ಯಕ್ಷರ ಫೋಟೋ ಇಲ್ಲದಿರುವುದು ವಿಜಯೇಂದ್ರ ಅವರ ಆಪ್ತ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಬೆಲ್ಲದ್ ನೇತೃತ್ವದ ತಂಡದ ಈ ನಡೆಯಿಂದ ಬೇಸತ್ತಿರುವ ವಿಜಯೇಂದ್ರ, ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲಕ್ಕೆ ಶೀಘ್ರವೇ ತೆರೆ ಎಳೆಯಬೇಕೆಂದು ತೀರ್ಮಾನಿಸಿದ್ದಾರೆ.
ಹೀಗಾಗಿ, ಮುಂಬರುವ ಕೋರ್ ಕಮಿಟಿ ಸಭೆಯಲ್ಲಿ ತಮಗೆ ಉಂಟಾದ ಮುಜುಗರದ ಬಗ್ಗೆ ನೇರವಾಗಿಯೇ ಪ್ರಶ್ನೆಗಳನ್ನು ಕೇಳಲು ವಿಜಯೇಂದ್ರ ಸಿದ್ಧತೆ ನಡೆಸಿದ್ದಾರೆ. ಕೇವಲ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲದೆ, ಈ ವಿಚಾರವನ್ನು ಬಿಜೆಪಿ ಹೈಕಮಾಂಡ್ ಗಮನಕ್ಕೂ ತರಲು ಅವರು ನಿರ್ಧರಿಸಿದ್ದಾರೆ. ಪಕ್ಷದೊಳಗಿನ ತಟಸ್ಥ ಬಣದ ನಡೆ ಹಾಗೂ ಪದೇ ಪದೇ ಸೃಷ್ಟಿಯಾಗುತ್ತಿರುವ ಇಂತಹ ಗೊಂದಲಗಳಿಗೆ ಬ್ರೇಕ್ ಹಾಕಲು ವಿಜಯೇಂದ್ರ ಅವರು ಈ ಬಾರಿ ಕಠಿಣ ನಿಲುವು ತಳೆಯುವ ಮುನ್ಸೂಚನೆ ನೀಡಿದ್ದಾರೆ.




