Sunday, March 1, 2026
30.5 C
Bengaluru
Google search engine
LIVE
ಮನೆಜಿಲ್ಲೆಮದುವೆಯಾದ 15 ದಿನಕ್ಕೆ ನವದಂಪತಿ ದುರ್ಮರಣ;

ಮದುವೆಯಾದ 15 ದಿನಕ್ಕೆ ನವದಂಪತಿ ದುರ್ಮರಣ;

ಹಾವೇರಿ; ಹೊಸ ಜೀವನದ ಕನಸು ಹೊತ್ತು ಸಪ್ತಪದಿ ತುಳಿದಿದ್ದ ಆ ಜೋಡಿಗೆ ವಿಧಿ ಆಟವಾಡಿದ್ದಾನೆ. ಮದುವೆಯಾಗಿ ಕೇವಲ 15 ದಿನಗಳ ಸಂಭ್ರಮದಲ್ಲಿದ್ದ ನವದಂಪತಿ, ದೇವರ ದರ್ಶನ ಪಡೆದು ಹಿಂದಿರುಗುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಡಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಘಟನೆ ನಡೆದಿದೆ.

ಹಾವೇರಿ ನಗರದ ನಿವಾಸಿಗಳಾದ ಕಾರ್ತಿಕ್ ಹೂಗಾರ (34) ಹಾಗೂ ಐಶ್ವರ್ಯ (30) ಮೃತಪಟ್ಟ ದುರ್ದೈವಿಗಳು. ಇವರಿಬ್ಬರಿಗೂ ಕೇವಲ 15 ದಿನಗಳ ಹಿಂದೆಯಷ್ಟೇ ಅದ್ದೂರಿಯಾಗಿ ವಿವಾಹ ನಡೆದಿತ್ತು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಭ್ರಮದಲ್ಲಿದ್ದ ದಂಪತಿ, ಕುಟುಂಬದ ಹಿರಿಯರ ಹಾರೈಕೆಯಂತೆ ನಿನ್ನೆ ದೇವರ ದರ್ಶನಕ್ಕಾಗಿ ಪ್ರವಾಸ ತೆರಳಿದ್ದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ವಾಪಸ್ ಹಾವೇರಿಗೆ ಬರುತ್ತಿದ್ದ ಸಮಯದಲ್ಲಿ ವಿಧಿ ಅಟ್ಟಹಾಸ ಮೆರೆದಿದೆ.

ರಾಷ್ಟ್ರೀಯ ಹೆದ್ದಾರಿ 48ರ ಕಡಹಳ್ಳಿ ಬಳಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯ ಅಡಿಗೆ ನುಗ್ಗಿದ್ದು, ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಪರಿಣಾಮವಾಗಿ ಕಾರಿನ ಮುಂಭಾಗದಲ್ಲಿದ್ದ ಕಾರ್ತಿಕ್ ಮತ್ತು ಐಶ್ವರ್ಯ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಕಾರಿನಲ್ಲಿ ದಂಪತಿಯ ಜೊತೆಗಿದ್ದ ಇಬ್ಬರು ಸಂಬಂಧಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಪಘಾತ ನಡೆದ ಕೂಡಲೇ ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಕಾರಿನ ಅವಶೇಷಗಳ ನಡುವೆ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದಿದ್ದಾರೆ. ಸದ್ಯ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ತಡಸ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದೊಂದಿಗೆ ಹರಸಾಹಸ ಪಟ್ಟು ಮೃತದೇಹಗಳನ್ನು ಕಾರಿನಿಂದ ಹೊರಕ್ಕೆ ತೆಗೆಯಲಾಗಿದೆ. ಲಾರಿ ಚಾಲಕನ ನಿರ್ಲಕ್ಷ್ಯವೇ ಅಥವಾ ಕಾರು ಚಾಲಕನಿಗೆ ನಿಯಂತ್ರಣ ತಪ್ಪಿತೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಸ್ತುತ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮದುವೆಯಾಗಿ ಮನೆಗೆ ಬಂದಿದ್ದ ಲಕ್ಷ್ಮಿಯಂತಿದ್ದ ಸೊಸೆ ಮತ್ತು ಮಗ ಇಬ್ಬರೂ ಒಟ್ಟಿಗೆ ಸಾವನ್ನಪ್ಪಿದ ಸುದ್ದಿ ಕೇಳಿ ಹಾವೇರಿಯಲ್ಲಿರುವ ಅವರ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಮನೆತುಂಬಾ ಇದ್ದ ಮದುವೆಯ ಸಂಭ್ರಮದ ಕಳೆ ಮಾಸುವ ಮುನ್ನವೇ ಸೂತಕದ ಛಾಯೆ ಆವರಿಸಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments