ಜಿಲ್ಲೆಶಿಕ್ಷಣಸುದ್ದಿ

ಶುಲ್ಕಕ್ಕಾಗಿ ಪಿಯು ವಿದ್ಯಾರ್ಥಿನಿಗೆ ಕಿರುಕುಳ:ಬೈಕ್ ಅಡಮಾನ ಇರಿಸಿಕೊಂಡು ಹಾಲ್ ಟಿಕೆಟ್ ನೀಡಿದ ಕಾಲೇಜು!

ಹಾವೇರಿ: ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಬೇಕಾದ ಶಿಕ್ಷಣ ಸಂಸ್ಥೆಯೇ, ಬಾಕಿ ಇರುವ ಶುಲ್ಕದ ನೆಪವೊಡ್ಡಿ ವಿದ್ಯಾರ್ಥಿನಿಯೊಬ್ಬಳ ಭವಿಷ್ಯದ ಜೊತೆ ಆಟವಾಡಿರುವ ಅಮಾನವೀಯ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ನಡೆದಿದೆ.

ರಾಣೇಬೆನ್ನೂರಿನ BAJSS ಕಾಲೇಜಿನ ವಿದ್ಯಾರ್ಥಿನಿ ಸಾರಾ ಜೆಸ್ಸಿಕಾ ಎಂಬಾಕೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದಳು. ಇಂದು ಕನ್ನಡ ಪರೀಕ್ಷೆಯಿದ್ದರೂ, ಸುಮಾರು 30 ಸಾವಿರ ರೂಪಾಯಿ ಕಾಲೇಜು ಶುಲ್ಕ ಬಾಕಿ ಇದೆ ಎಂಬ ಕಾರಣಕ್ಕೆ ಆಡಳಿತ ಮಂಡಳಿ ಆಕೆಗೆ ಹಾಲ್ ಟಿಕೆಟ್ ನೀಡಲು ನಿರಾಕರಿಸಿದೆ.

ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೋರಿಕೊಂಡಾಗ, ಕಾಲೇಜಿನ ಶಿಕ್ಷಕಿ ಸುನೀತಾ ಬಿ. ಅವರು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ . “ಎಲ್ಲಾ ಕಾಲೇಜಿನವರೂ ಪುಕ್ಕಟೆ ಕಲಿಸುತ್ತಾರಾ?” ಎಂದು ಪ್ರಶ್ನಿಸುವ ಮೂಲಕ ವಿದ್ಯಾರ್ಥಿನಿಯನ್ನು ಸತಾಯಿಸಿದ್ದಾರೆ. ಪರೀಕ್ಷೆಯ ಒತ್ತಡದಲ್ಲಿದ್ದ ವಿದ್ಯಾರ್ಥಿನಿ ಹಾಲ್ ಟಿಕೆಟ್‌ಗಾಗಿ ಗಂಟೆಗಟ್ಟಲೆ ಪರದಾಡುವಂತಾಗಿದ್ದು.

ಈ ವಿಷಯ ತಿಳಿದ ಸಾಮಾಜಿಕ ಹೋರಾಟಗಾರ ಹನುಮಂತಪ್ಪ ಅವರು ಸ್ಥಳಕ್ಕೆ ಧಾವಿಸಿ ಕಾಲೇಜು ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿನಿಯ ಭವಿಷ್ಯದ ಜೊತೆ ಚೆಲ್ಲಾಟವಾಡದಂತೆ ಆಗ್ರಹಿಸಿದ್ದು. ಅಂತಿಮವಾಗಿ, ಶುಲ್ಕ ಪಾವತಿಸುವವರೆಗೂ ಬೈಕನ್ನು ಅಡಮಾನವಾಗಿ ಇಟ್ಟುಕೊಳ್ಳುವ ಅಮಾನವೀಯ ಷರತ್ತಿನ ಮೇಲೆ ಕಾಲೇಜು ಮಂಡಳಿ ವಿದ್ಯಾರ್ಥಿನಿಗೆ ಹಾಲ್ ಟಿಕೆಟ್ ನೀಡಿದೆ.

ಈ ಅಮಾನವೀಯ ಘಟನೆಯ ವರದಿ ಹೊರಬೀಳುತ್ತಿದ್ದಂತೆ ಎಚ್ಚೆತ್ತ ರಾಣೇಬೆನ್ನೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ್ ಅಡಿಗಾ ಅವರು ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿನಿಗೆ ಪರೀಕ್ಷೆಯಿಂದ ವಂಚಿಸಿ ಕಿರುಕುಳ ನೀಡಿದ ಕಾಲೇಜು ಆಡಳಿತ ಮಂಡಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವುದಾಗಿ ತಿಳಿಸಿದ್ದಾರೆ.

Comments (0)

Your email address will not be published. Required fields are marked *

Back to top button