ಜಿಲ್ಲೆಸುದ್ದಿ

ಸಿಟಿ ಒಳಗೂ ನುಗ್ಗಿದ ವೀಲ್ಹಿಂಗ್ ಪುಂಡರು; ಡಾಲರ್ಸ್ ಕಾಲೋನಿಯಲ್ಲಿ ಬೈಕ್ ಸವಾರರ ಕಿರಾತಕ ಸ್ಟಂಟ್

ಬೆಂಗಳೂರು: ನಗರದಲ್ಲಿ ವೀಲ್ಹಿಂಗ್ ಪುಂಡರ ಅಟ್ಟಹಾಸ ಮಿತಿಮೀರಿದೆ. ಇದುವರೆಗೆ ಕೇವಲ ನಗರದ ಹೊರವಲಯದ ನಿರ್ಜನ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಅಪಾಯಕಾರಿ ಸ್ಟಂಟ್‌ಗಳು, ಈಗ ರಾಜಾರೋಷವಾಗಿ ನಗರದ ಹೃದಯಭಾಗದ ಜನನಿಬಿಡ ರಸ್ತೆಗಳಿಗೂ ಎಂಟ್ರಿ ಕೊಟ್ಟಿವೆ. ಜೆಪಿ ನಗರದ ಪ್ರತಿಷ್ಠಿತ ಡಾಲರ್ಸ್ ಕಾಲೋನಿಯಂತಹ ರಸ್ತೆಗಳಲ್ಲಿ ಬೈಕ್ ಪುಂಡರು ಪ್ರಾಣದ ಹಂಗು ತೊರೆದು ಸರ್ಕಸ್ ಮಾಡುತ್ತಿರುವುದು ಕಂಡುಬಂದಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಡಾಲರ್ಸ್ ಕಾಲೋನಿಯ 3ನೇ ಮೇನ್ ಮತ್ತು 4ನೇ ಕ್ರಾಸ್‌ನಂತಹ ಕಿರಿದಾದ ರಸ್ತೆಗಳಲ್ಲಿ ಈ ಯುವಕರು ಬೈಕ್‌ನ ಮುಂಭಾಗದ ಚಕ್ರವನ್ನು ಗಾಳಿಯಲ್ಲಿ ತೇಲಿಸಿ ವೀಲ್ಹಿಂಗ್ ಮಾಡುತ್ತಿದ್ದಾರೆ. ಸಣ್ಣದೊಂದು ಆಯತಪ್ಪಿದರೂ ಅಕ್ಕಪಕ್ಕದಲ್ಲಿ ಸಂಚರಿಸುವ ಪಾದಚಾರಿಗಳು ಅಥವಾ ವಾಹನ ಸವಾರರ ಪ್ರಾಣಕ್ಕೆ ಕುತ್ತು ಬರುವುದು ಖಚಿತ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರ ಭಯವಿಲ್ಲದೆ ಈ ಪುಂಡರು ವೀಲ್ಹಿಂಗ್ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುತ್ತಿದ್ದಾರೆ.

ಸಾರ್ವಜನಿಕರು ಈಗ ರಸ್ತೆಯಲ್ಲಿ ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. “ಇವರಿಗೆ ಬ್ರೇಕ್ ಹಾಕೋದು ಯಾವಾಗ?” ಎಂಬ ಪ್ರಶ್ನೆ ನಗರವಾಸಿಗಳಲ್ಲಿ ಕಾಡುತ್ತಿದೆ. ಪೊಲೀಸರು ತಕ್ಷಣವೇ ಇಂತಹ ಪುಂಡರ ವಿರುದ್ಧ ಕಠಿಣ ಕ್ರಮ ಜರುಗಿಸಿ, ಅವರ ಚಾಲನಾ ಪರವಾನಗಿ ರದ್ದುಗೊಳಿಸಬೇಕು ಮತ್ತು ವಾಹನಗಳನ್ನು ಜಪ್ತಿ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

Comments (0)

Your email address will not be published. Required fields are marked *

Back to top button