ಭಾರತದಲ್ಲಿ ಮಹಿಳೆಯರ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಮಾರಣಾಂತಿಕ ಗರ್ಭಕಂಠದ ಕ್ಯಾನ್ಸರ್ ಮುಕ್ತ ಭಾರತವನ್ನಾಗಿಸಲು ಬೃಹತ್ ಹೆಚ್ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇಶದಲ್ಲಿ ಪ್ರತಿ ವರ್ಷ ಸುಮಾರು 75,000 ಮಹಿಳೆಯರು ಈ ಕ್ಯಾನ್ಸರ್ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು, ಈ ಸಾವಿನ ಪ್ರಮಾಣವನ್ನು ತಡೆಗಟ್ಟಲು ಈ ಲಸಿಕೆ ಒಂದು ಪ್ರಬಲ ರಕ್ಷಾ ಕವಚವಾಗಿ ಕೆಲಸ ಮಾಡಲಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನಂತೆ, ಈ ಅಭಿಯಾನದಲ್ಲಿ 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ ಎರಡು ಡೋಸ್ಗಳನ್ನು ನೀಡಲು ಉದ್ದೇಶಿಸಲಾಗಿತ್ತಾದರೂ, ಈಗ ಕೇವಲ ಒಂದು ಡೋಸ್ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈ ಒಂದು ಡೋಸ್ ಲಸಿಕೆಯು ಹೆಚ್ಪಿವಿ ಸೋಂಕಿನಿಂದ ಬರುವ ಶೇ. 85ರಷ್ಟು ಕ್ಯಾನ್ಸರ್ ಅನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಮೊದಲ ಹಂತದಲ್ಲಿ ದೇಶಾದ್ಯಂತ ಸುಮಾರು 8 ಕೋಟಿ ಹೆಣ್ಣು ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಶಾಲೆಗಳು ಮತ್ತು ಸರ್ಕಾರಿ ಲಸಿಕಾ ಕೇಂದ್ರಗಳ ಮೂಲಕ ಈ ಅಭಿಯಾನ ಮನೆಮನೆಗೆ ತಲುಪಲಿದೆ.
ಕೇಂದ್ರ ಬಜೆಟ್ನಲ್ಲಿ ಘೋಷಿಸಿದಂತೆ, ಮುಂದಿನ ಮೂರು ವರ್ಷಗಳ ಕಾಲ ಹಂತ ಹಂತವಾಗಿ ಈ ಬೃಹತ್ ಕಾರ್ಯಕ್ರಮ ಜಾರಿಯಾಗಲಿದೆ. ಮಹಿಳೆಯರ ಜೀವ ಉಳಿಸುವ ಈ ಲಸಿಕೆಯು ಭವಿಷ್ಯದ ಪೀಳಿಗೆಯನ್ನು ಕ್ಯಾನ್ಸರ್ ಮುಕ್ತವಾಗಿಸುವ ಮಹತ್ವದ ಹೆಜ್ಜೆಯಾಗಿದೆ. ಲಸಿಕೆ ಪಡೆಯುವ ಮೂಲಕ ಪ್ರತಿಯೊಬ್ಬ ಹೆಣ್ಣು ಮಗು ಈ ಗಂಭೀರ ಕಾಯಿಲೆಯಿಂದ ಸುರಕ್ಷಿತವಾಗಿರಲಿ ಎಂಬುದು ಸರ್ಕಾರದ ಆಶಯವಾಗಿದೆ.


