Top Newsದೇಶ/ವಿದೇಶಸುದ್ದಿ

ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ; ಐದೇ ದಿನದಲ್ಲಿ ಇಬ್ಬರು ಬಲಿ

ದೆಹಲಿ: ಉತ್ತಮ್ ನಗರ ಪೂರ್ವ ಮೆಟ್ರೋ ನಿಲ್ದಾಣವು ಸತತ ಆತ್ಮಹತ್ಯೆ ಪ್ರಕರಣಗಳಿಂದ ಬೆಚ್ಚಿಬಿದ್ದಿದೆ. ಕೇವಲ ಐದು ದಿನಗಳ ಅಂತರದಲ್ಲಿ ಇಲ್ಲಿ ಇಬ್ಬರು ಮೆಟ್ರೋ ರೈಲಿಗೆ ಹಾರಿ ಪ್ರಾಣ ಕಳೆದುಕೊಂಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ರಾಜಸ್ಥಾನ ಮೂಲದ 45 ವರ್ಷದ ಮಹಾರಾಜ್ ಸಿಂಗ್ ಎಂಬುವವರು ರೈಲು ಬರುತ್ತಿದ್ದಂತೆಯೇ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಕಳೆದ ಹಲವು ವರ್ಷಗಳಿಂದ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು , ತಮ್ಮ ಅಣ್ಣನ ಮಗಳ ಮದುವೆಗೆಂದು ದೆಹಲಿಗೆ ಬಂದಿದ್ದ ಅವರು, ಚಿಕಿತ್ಸೆ ಪಡೆದ ಮರುದಿನವೇ ಈ ಕಠಿಣ ನಿರ್ಧಾರ ಕೈಗೊಂಡಿರುವುದು ಕುಟುಂಬಸ್ಥರನ್ನು ಕಣ್ಣೀರಲ್ಲಿ ಮುಳುಗಿಸಿದೆ.

ಇದೇ ನಿಲ್ದಾಣದಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ ವೈಯಕ್ತಿಕ ಸಮಸ್ಯೆಯಿಂದ ಬೇಸತ್ತಿದ್ದ ವಿದ್ಯಾರ್ಥಿಯೊಬ್ಬ ಹಳಿ ಮೇಲೆ ಹಾರಿ ಸಾವನ್ನಪ್ಪಿದ್ದಾನೆ. ನಜಾಫ್‌ಗಢ ನಿವಾಸಿಯಾಗಿದ್ದ ಈತ 12ನೇ ತರಗತಿ ಮುಗಿಸಿ ಮುಂದಿನ ವ್ಯಾಸಂಗಕ್ಕಾಗಿ ಕೋಚಿಂಗ್ ಪಡೆಯುತ್ತಿದ್ದನು. ಮೃತ ಬಾಲಕ ಪೋಷಕರಿಗೆ ಒಬ್ಬನೇ ಮಗನಾಗಿದ್ದು, ಆತನ ತಂದೆ ಡಿಟಿಸಿಯಲ್ಲಿ ಗುತ್ತಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಎರಡೂ ಘಟನೆಗಳಿಂದಾಗಿ ದೆಹಲಿ ಮೆಟ್ರೋದ ನೀಲಿ ಮಾರ್ಗದ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ಪ್ರಸ್ತುತ ಪೊಲೀಸರು ಮೃತದೇಹಗಳನ್ನು ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಿದ್ದು, ಬಿಎನ್‌ಎಸ್‌ಎಸ್ ಸೆಕ್ಷನ್ 194 ಮತ್ತು ಸಿಆರ್‌ಪಿಸಿ 174 ರ ಅಡಿಯಲ್ಲಿ ತನಿಖೆ ಮುಂದುವರಿಸಿದ್ದಾರೆ.

Comments (0)

Your email address will not be published. Required fields are marked *

Back to top button