ಜಿಲ್ಲೆಸುದ್ದಿ

ಮಾಕಳಿಯಲ್ಲಿ ಪರ್ಫ್ಯೂಮ್ ಗೋದಾಮು ಭಸ್ಮ;20 ಕೋಟಿಗೂ ಅಧಿಕ ನಷ್ಟ

ಬೆಂಗಳೂರು: ನೆಲಮಂಗಲ ರಸ್ತೆಯ ಮಾಕಳಿ ಬಳಿ ಇರುವ ಪರ್ಫ್ಯೂಮ್ ಗೋದಾಮಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 20 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮಾಕಳಿ ಗ್ರಾಮದ ಲೋಕೇಶ್ ಎಂಬುವವರಿಗೆ ಸೇರಿದ ಈ ಗೋದಾಮನ್ನು ಮೂರು ಖಾಸಗಿ ಕಂಪನಿಗಳಿಗೆ ಬಾಡಿಗೆಗೆ ನೀಡಲಾಗಿತ್ತು. ಇಲ್ಲಿ ಪರ್ಫ್ಯೂಮ್‌ಗಳಲ್ಲದೆ ಎಸಿ, ಫ್ರಿಡ್ಜ್ ಮತ್ತು ಪೆಡಿಗ್ರಿಗಳನ್ನು ಸಂಗ್ರಹಿಸಿಡಲಾಗಿತ್ತು. ಮೊದಲು ಪರ್ಫ್ಯೂಮ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ, ನಂತರ ಅಲ್ಲಿದ್ದ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಪಕ್ಕದ ಎಸಿ ಗೋದಾಮಿಗೂ ವ್ಯಾಪಿಸಿ ಭೀಕರ ಸ್ವರೂಪ ಪಡೆದುಕೊಂಡಿತ್ತು.

ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಗೋದಾಮುಗಳಲ್ಲಿ 40ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹೆಚ್ಚಿನ ಸಿಬ್ಬಂದಿ ಹೊರಗೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಈ ಅವಘಡದಲ್ಲಿ ಐವರು ಕಾರ್ಮಿಕರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅವಘಡದ ತೀವ್ರತೆಗೆ ಗೋದಾಮಿನಲ್ಲಿದ್ದ ವಾಹನಗಳು ಕೂಡ ಸುಟ್ಟು ಕರಕಲಾಗಿವೆ. ಮುಗಿಲೆತ್ತರಕ್ಕೆ ಚಿಮ್ಮುತ್ತಿದ್ದ ಬೆಂಕಿಯ ಜ್ವಾಲೆ ಮತ್ತು ಸ್ಫೋಟದ ಭಯಾನಕ ಶಬ್ದದಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 10 ವಾಹನಗಳ ಸಹಾಯದೊಂದಿಗೆ ಸುದೀರ್ಘ ಕಾರ್ಯಾಚರಣೆ ನಡೆಸಿ, ಅಂತಿಮವಾಗಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಅಗ್ನಿ ಅವಘಡದಿಂದಾಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದ್ದು, ಮಾಕಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ಗೋದಾಮಿನಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments (0)

Your email address will not be published. Required fields are marked *

Back to top button