Sunday, February 22, 2026
31 C
Bengaluru
Google search engine
LIVE
ಮನೆಜಿಲ್ಲೆ೭ ದಿನದಲ್ಲಿ ೨ ಬಲಿ ಪಡೆದ ಕಾಡಾನೆ ಸೆರೆ; ಪರಿಹಾರಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ

೭ ದಿನದಲ್ಲಿ ೨ ಬಲಿ ಪಡೆದ ಕಾಡಾನೆ ಸೆರೆ; ಪರಿಹಾರಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ

ಚಿಕ್ಕಮಗಳೂರು: ಕಾಫಿ ತೋಟಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕೇವಲ ಏಳು ದಿನಗಳ ಅಂತರದಲ್ಲಿ ಎರಡನೇ ಜೀವ ಬಲಿಯಾಗಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ನಾಗೇಶ್ ಗೌಡ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಹೊಸಪೇಟೆ ಮೂಲದ 34 ವರ್ಷದ ಕಾರ್ಮಿಕ ಮಹಿಳೆ ಬೋರಮ್ಮ ಎಂಬುವರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕೆಲಸಕ್ಕೆ ಹೋಗುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಆನೆಯ ತುಳಿತಕ್ಕೆ ಸಿಲುಕಿ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ತೋಟದಲ್ಲಿ ಕಳೆದ ಒಂದು ವಾರದ ಹಿಂದಷ್ಟೇ ಹಾವೇರಿ ಮೂಲದ ಯಲ್ಲಪ್ಪ ಎಂಬ ಕಾರ್ಮಿಕ ಕೂಡ ಆನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದರು.

ಈ ಸರಣಿ ಸಾವುಗಳಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು ಕೂಡಲೇ ಕಾರ್ಯಪ್ರವೃತ್ತವಾಗಿ ಆನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಆರಂಭಿಸಿತು. ಸುಮಾರು 75 ಸಿಬ್ಬಂದಿಗಳು ಹಾಗೂ ಏಳು ಕುಮ್ಕಿ ಆನೆಗಳ ಸಹಾಯದೊಂದಿಗೆ ನಡೆದ ಈ ಬೃಹತ್ ಕಾರ್ಯಾಚರಣೆಯು ಅಂತಿಮವಾಗಿ ಯಶಸ್ವಿಯಾಗಿದೆ. ಮಹಿಳೆಯ ಮೇಲೆ ದಾಳಿ ನಡೆದ ಸ್ಥಳದಿಂದ ಅಲ್ಪ ದೂರದಲ್ಲೇ ಕಾಡಾನೆಯನ್ನು ಪತ್ತೆಹಚ್ಚಿದ ತಂಡ, ಅರವಳಿಕೆ ಚುಚ್ಚುಮದ್ದು ನೀಡುವ ಮೂಲಕ ಕುಮ್ಕಿ ಆನೆಗಳ ನೆರವಿನಿಂದ ಕಾಡಾನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ಪಡೆದು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಆನೆ ಹಾವಳಿ ಹೆಚ್ಚಾಗಿರುವುದರಿಂದ ಕಾಫಿ ತೋಟಗಳಿಗೆ ಕೆಲಸಕ್ಕೆ ತೆರಳದಂತೆ ಅರಣ್ಯ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ನೀಡಿತ್ತು. ಆದರೆ ಬಡ ಕಾರ್ಮಿಕರಿಗೆ ಜೀವನೋಪಾಯಕ್ಕಾಗಿ ಬೇರೆ ದಾರಿ ಇಲ್ಲದ ಕಾರಣ, ಅನಿವಾರ್ಯವಾಗಿ ತೋಟದ ಕೆಲಸಕ್ಕೆ ತೆರಳುತ್ತಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments