ಕರ್ನಾಟಕದಾದ್ಯಂತ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರು, ಚಿತ್ರದುರ್ಗ ಮತ್ತು ಬೆಂಗಳೂರು ಉತ್ತರ ತಾಲೂಕಿನಲ್ಲಿ ಈ ದುರ್ಘಟನೆಗಳು ಸಂಭವಿಸಿದ್ದು, ರಸ್ತೆ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿವೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮದಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಸವಾರರಾದ ಸುರೇಶ್ (63) ಮತ್ತು ಮಾದೇವ್ (52) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮತ್ತೊಬ್ಬ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ.
ಬೆಂಗಳೂರು ನಗರದ ಏರ್‌ಪೋರ್ಟ್ ರಸ್ತೆಯ ಹುಣಸಮಾರನಹಳ್ಳಿ ಬಳಿ ಅಮಾನವೀಯ ಘಟನೆಯೊಂದು ನಡೆದಿದೆ. ನಿಷೇಧಿತ ಸಮಯದಲ್ಲಿ ನಗರಕ್ಕೆ ಪ್ರವೇಶಿಸಲು ಯತ್ನಿಸಿದ ಗೂಡ್ಸ್ ವಾಹನವನ್ನು ತಡೆದ ಸಂಚಾರಿ ಪೊಲೀಸ್ ಕಾನ್‌ಸ್ಟೇಬಲ್ ವಿಕಾಸ್ ಅವರ ಮೇಲೆ ಚಾಲಕ ವಾಹನ ಚಲಾಯಿಸಿದ್ದಾನೆ. ನಿತ್ಯ ಬೆಳಗ್ಗೆ 7:30ರಿಂದ 11 ಗಂಟೆಯವರೆಗೆ ಈ ರಸ್ತೆಯಲ್ಲಿ ಗೂಡ್ಸ್ ವಾಹನಗಳಿಗೆ ಪ್ರವೇಶ ನಿಷೇಧವಿದ್ದರೂ, ನಿಯಮ ಉಲ್ಲಂಘಿಸಿ ಬಂದ ಚಾಲಕ ಭರಕತ್ ಖಾನ್, ವಾಹನ ನಿಲ್ಲಿಸುವಂತೆ ಸೂಚಿಸಿದ ವಿಕಾಸ್ ಅವರಿಗೆ ಗುದ್ದಿಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ವಿಕಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಆರೋಪಿ ಚಾಲಕನನ್ನು ಬಂಧಿಸಿ, ಗೂಡ್ಸ್ ವಾಹನವನ್ನು ಜಪ್ತಿ ಮಾಡಿದ್ದಾರೆ. ಘಟನಾ ಸ್ಥಳಗಳಿಗೆ ಆಯಾ ವ್ಯಾಪ್ತಿಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


