ಜಿಲ್ಲೆರಾಜ್ಯಸುದ್ದಿ

ಮಂತ್ರಾಲಯದಲ್ಲಿ ನೀರಿನ ಅಭಾವ; ಭಕ್ತರಿಗಾಗಿ ಮಠದಿಂದ ಹೊಸ ಪ್ಲ್ಯಾನ್!

ಮಂತ್ರಾಲಯ: ಬೇಸಿಗೆ ಆರಂಭಕ್ಕೂ ಮುನ್ನವೇ ಮಂತ್ರಾಲಯದಲ್ಲಿ ತೀವ್ರ ನೀರಿನ ಸಮಸ್ಯೆ ತಲೆದೋರಿದ್ದು, ರಾಯರ ದರ್ಶನಕ್ಕೆ ಬರುವ ಭಕ್ತರು ಪುಣ್ಯಸ್ನಾನ ಮಾಡಲು ತುಂಗಭದ್ರಾ ನದಿಯಲ್ಲಿ ನೀರಿಲ್ಲದೆ ಪರದಾಡುವಂತಾಗಿದೆ.

ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಜಲಾಶಯದಲ್ಲಿ ಅತ್ಯಲ್ಪ ಪ್ರಮಾಣದ ನೀರು ಮಾತ್ರ ಲಭ್ಯವಿರುವುದರಿಂದ ಈಗಾಗಲೇ ನದಿಯ ಗೇಟುಗಳನ್ನು ಮುಚ್ಚಲಾಗಿದೆ. ಈ ಪರಿಸ್ಥಿತಿಯಿಂದಾಗಿ ದೂರದೂರುಗಳಿಂದ ಬರುವ ಭಕ್ತರಿಗೆ ಸ್ನಾನ ಮತ್ತು ಕುಡಿಯುವ ನೀರಿನ ತೊಂದರೆಯಾಗುತ್ತಿದ್ದು, ಮಂತ್ರಾಲಯ ಮಠವು ಈ ಸಮಸ್ಯೆಯನ್ನು ನಿವಾರಿಸಲು ಸಮರೋಪಾದಿಯಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಕೈಗೊಂಡಿದೆ.

ಭಕ್ತರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಲು ಮಠದ ವತಿಯಿಂದ ಬೋರ್‌ವೆಲ್ ನೀರನ್ನು ನಿರಂತರವಾಗಿ ಸರಬರಾಜು ಮಾಡಲಾಗುತ್ತಿದೆ. ಇದರೊಂದಿಗೆ ನದಿಯ ಮೇಲ್ಭಾಗದಲ್ಲಿ ಹರಿಯುವ ಅಲ್ಪ ಪ್ರಮಾಣದ ನೀರನ್ನು ಪಂಪ್ ಮಾಡಿ, ಅದನ್ನು ಶುದ್ಧೀಕರಿಸುವ ಮೂಲಕ ಕುಡಿಯಲು ಮತ್ತು ಸ್ನಾನಕ್ಕೆ ಬಳಕೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯದ ಕೊರತೆಯಾಗದಂತೆ ನಾವು ಸನ್ನದ್ಧರಾಗಿದ್ದೇವೆ ಎಂದು ಸುಭುದೇಂದ್ರ ತೀರ್ಥರು ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ನದಿಯ ದಂಡೆಯ ಬಳಿ ಶವರ್‌ಗಳನ್ನು ಅಳವಡಿಸುವ ಮೂಲಕ ಭಕ್ತರಿಗೆ ಸುಲಭವಾಗಿ ಸ್ನಾನ ಮಾಡಲು ಹೆಚ್ಚಿನ ಸೌಕರ್ಯ ಒದಗಿಸುವ ಯೋಜನೆಯನ್ನು ಮಠ ಹಮ್ಮಿಕೊಂಡಿದೆ.

Comments (0)

Your email address will not be published. Required fields are marked *

Back to top button