Top Newsಜಿಲ್ಲೆರಾಜ್ಯಸುದ್ದಿ

ಬೆಂಗಳೂರಲ್ಲಿ ಡ್ರಗ್ಸ್ ಸುನಾಮಿ;ಏರ್‌ಪೋರ್ಟ್‌ನಲ್ಲಿ 2.5 ಕೆಜಿ ಡ್ರಗ್ಸ್ ಸೀಜ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾದಕದ್ರವ್ಯ ಜಾಲದ ವಿರುದ್ಧ ಪೊಲೀಸರು ಮತ್ತು ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ವಿವಿಧೆಡೆ ದಂಧೆ ನಡೆಸುತ್ತಿದ್ದ ಸೆನೆಗಲ್ ಮೂಲದ ಬ್ಯಾರಿ ಯಾಯ ಅಲಿಯಾಸ್ ಒಕೊಲಿ ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಎಂಡಿಎಂಎ, ಎಲ್‌ಎಸ್‌ಡಿ, ಕೊಕೇನ್ ಹಾಗೂ ಹೈಡ್ರೋ ಗಾಂಜಾ ಸೇರಿದಂತೆ ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಆಘಾತಕಾರಿ ವಿಷಯವೆಂದರೆ ಈ ಹಿಂದೆ ಮಾದಕವಸ್ತು ದಂಧೆಯಲ್ಲೇ ಸಿಕ್ಕಿಬಿದ್ದು ಗಡಿಪಾರಾಗಿದ್ದ ಈ ಆರೋಪಿ, ಮತ್ತೆ ಬೇರೊಂದು ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ನಗರಕ್ಕೆ ಮರಳಿದ್ದು ಈಗ ತನಿಖೆಯ ಪ್ರಮುಖ ಅಂಶವಾಗಿದೆ. ಇದೇ ವೇಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ದೆಹಲಿಯಿಂದ ಆಗಮಿಸಿದ ನೈಜೀರಿಯಾ ಮೂಲದ ವೆರೋನಿಕಾ ಎಮ್ಯಾನುಯೆಲ್ ಎಂಬ ಮಹಿಳೆಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆಕೆಯ ಬಳಿಯಿದ್ದ ಬರೋಬ್ಬರಿ 2.5 ಕೆಜಿ ಮೆಥಾಂಪೆಟಮೈನ್ ಅನ್ನು ಸೀಜ್ ಮಾಡಲಾಗಿದೆ.

ನಿರಂತರವಾಗಿ ನಡೆಯುತ್ತಿರುವ ಈ ದಾಳಿಗಳು ಸಿಲಿಕಾನ್ ಸಿಟಿಯಲ್ಲಿ ಹರಡಿರುವ ವಿದೇಶಿ ಡ್ರಗ್ಸ್ ಪೆಡ್ಲರ್‌ಗಳ ಜಾಲವನ್ನು ಬಯಲಿಗೆಳೆದಿದ್ದು, ಅಕ್ರಮವಾಗಿ ನಗರಕ್ಕೆ ನುಸುಳುತ್ತಿರುವ ಮತ್ತು ದಂಧೆಯಲ್ಲಿ ತೊಡಗಿರುವವರ ಪತ್ತೆಗೆ ಅಧಿಕಾರಿಗಳು ಜಾಲ ಬೀಸಿದ್ದಾರೆ.

Comments (0)

Your email address will not be published. Required fields are marked *

Back to top button