ಸಿನಿಮಾಸುದ್ದಿ

ಚಂದನವನಕ್ಕೆ ‘ಯಾರೇ ನೀನು ಚೆಲುವೆ’ ಸಂಗೀತಾ ಕಂಬ್ಯಾಕ್..!

ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸುಂದರಿ, ‘ಯಾರೇ ನೀನು ಚೆಲುವೆ’ ಖ್ಯಾತಿಯ ನಟಿ ಸಂಗೀತಾ ಮಾಧವನ್ ಬರೋಬ್ಬರಿ 25 ವರ್ಷಗಳ ನಂತರ ಮತ್ತೆ ಚಂದನವನಕ್ಕೆ ಮರಳಿ ಬಂದಿದ್ದಾರೆ. 1998ರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ನಟಿಸಿ ಕನ್ನಡಿಗರ ಮನಗೆದ್ದಿದ್ದ ಸಂಗೀತಾ, 2000ನೇ ಇಸವಿಯ ‘ಯಾರೇ ನೀ ಅಭಿಮಾನಿ’ ಚಿತ್ರದ ಬಳಿಕ ಬೆಳ್ಳಿತೆರೆಯಿಂದ ಸಂಪೂರ್ಣವಾಗಿ ದೂರ ಸರಿದಿದ್ದರು. ಈಗ ಸುದೀರ್ಘ ವಿರಾಮದ ನಂತರ ಹೊಸ ಸಿನಿಮಾವೊಂದರ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.

ಕಿಚ್ಚ ಸುದೀಪ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಮತ್ತು ‘ರನ್ನ’, ‘ವಿಕ್ಟರಿ’ ಸಿನಿಮಾಗಳಿಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದ ಕಿರಣ್ ವಿಶ್ವನಾಥ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹೊಸ ಸಿನಿಮಾದಲ್ಲಿ ಸಂಗೀತಾ ಮಾಧವನ್ ಅವರು ‘ಭಾಗ್ಯ’ ಎಂಬ ಹೆಸರಿನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕನ ತಾಯಿಯಾಗಿ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ ಚಿತ್ರತಂಡವು ‘ಮಹಾನಟಿ’ ಖ್ಯಾತಿಯ ಪ್ರಿಯಾಂಕಾ ಆಚಾರ್ ಅವರನ್ನು ನಾಯಕಿಯಾಗಿ ಘೋಷಿಸಿದ್ದು, ಈಗ ಸಂಗೀತಾ ಅವರ ಸೇರ್ಪಡೆಯಿಂದ ಚಿತ್ರದ ಬಗ್ಗೆ ನಿರೀಕ್ಷೆ ಡಬಲ್ ಆಗಿದೆ.

ಗೌರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಶೀರ್ಷಿಕೆ ಮತ್ತು ನಾಯಕ ನಟನ ವಿವರಗಳನ್ನು ಸದ್ಯಕ್ಕೆ ಚಿತ್ರತಂಡ ರಹಸ್ಯವಾಗಿಟ್ಟಿದೆ. ನಾಯಕನ ಪರಿಚಯವನ್ನು ಅದ್ಧೂರಿಯಾಗಿ ಮಾಡಲು ಯೋಜಿಸಲಾಗಿದ್ದು, ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಎರಡೂವರೆ ದಶಕಗಳ ಬಳಿಕ ತಮ್ಮ ನೆಚ್ಚಿನ ನಟಿಯನ್ನು ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Comments (0)

Your email address will not be published. Required fields are marked *

Back to top button