
ವಿಧಾನಸಭೆಯಲ್ಲಿ ಶಾಸಕರಾದ ಶಿವಲಿಂಗೇಗೌಡ ಹಾಗೂ ಶರಣು ಸಲಗಾರ ನಡುವೆ ನಡೆದ ಮಾತಿನ ಜಟಾಪಟಿ ಮತ್ತು ಗದ್ದಲದ ಕುರಿತು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಅವರು ಮಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದನ ಎಂಬುದು ಒಂದು ಕುಟುಂಬವಿದ್ದಂತೆ, ಅಲ್ಲಿ ಚರ್ಚೆಗಳು ನಡೆಯುವುದು ಸಹಜವಾದರೂ ಶಾಸಕರು ಬಳಸುವ ಭಾಷೆ ಮತ್ತು ವರ್ತನೆ ಸಮಾಜಕ್ಕೆ ಮಾದರಿಯಾಗಿರಬೇಕು ,ಈ ಹಿಂದೆಯೂ ಇಂತಹ ಜಟಾಪಟಿಗಳು ನಡೆದಿದ್ದರೂ ಸಹ, ಚರ್ಚೆಯ ನಂತರ ಶಾಸಕರು ಅದನ್ನು ಅಲ್ಲಿಗೆ ಬಿಟ್ಟು ಸೌಹಾರ್ದತೆಯಿಂದ ಇರಬೇಕಿತ್ತು. ಆದರೆ ಊಟದ ವಿರಾಮದ ನಂತರವೂ ಮತ್ತೆ ಅದೇ ವಿಷಯ ಎಳೆದು ತಂದು ಗದ್ದಲ ಮಾಡಿದ್ದು ಸರಿಯಲ್ಲ, ಸದನ ನಡೆಸುವುದು ಕೇವಲ ಸಭಾಧ್ಯಕ್ಷರ ಕೆಲಸವಲ್ಲ, ಅದು ಪ್ರತಿಯೊಬ್ಬ ಸದಸ್ಯರ ಜವಾಬ್ದಾರಿಯಾಗಿದ್ದು, ಶಾಸಕರು ತಮ್ಮ ವರ್ತನೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದಿದ್ದಾರೆ.
ಹಿಂದೆ ಕರಾವಳಿಯ ಶಾಸಕರಿಗೆ ಸದನದಲ್ಲಿ ಅಪಾರ ಗೌರವವಿತ್ತು, ಆದರೆ ಈಗ ಶಾಸಕರು ಪರಸ್ಪರ ಪ್ರಾಣಿಗಳ ಹೆಸರನ್ನು ಎಳೆದು ತಂದು ಅವಮಾನಕರವಾಗಿ ಮಾತನಾಡುತ್ತಿರುವುದು ಇಡೀ ಜಿಲ್ಲೆಗೆ ಮತ್ತು ಹಿರಿಯರಿಗೆ ತರುವ ಅಗೌರವವಾಗಿದೆ. ನಾವು ಮಾಡುವ ಕೆಲಸ ಮತ್ತು ಬಳಸುವ ಭಾಷೆಯನ್ನು ಇಡೀ ರಾಜ್ಯದ ಜನರು ಗಮನಿಸುತ್ತಿರುತ್ತಾರೆ ಎಂಬ ಅರಿವು ಶಾಸಕರಿಗೆ ಇರಬೇಕು ಎಂದಿದ್ದಾರೆ .
ಶಾಸಕರು ತಮ್ಮ ಕ್ಷೇತ್ರದ ಜನರ ಪ್ರತಿನಿಧಿಗಳಾಗಿದ್ದು, ಕಾನೂನು ರೂಪಿಸುವ ಸ್ಥಾನದಲ್ಲಿರುವವರು ತಾವೇ ಗೌರವ ಕಳೆದುಕೊಳ್ಳುವಂತೆ ವರ್ತಿಸಬಾರದು. ಸಮಾಜವನ್ನು ತಿದ್ದುವ ಜವಾಬ್ದಾರಿ ಹೊತ್ತವರು ಶಿಸ್ತು ಪಾಲಿಸಿದಾಗ ಮಾತ್ರ ಜನಪ್ರತಿನಿಧಿಗಳ ಸ್ಥಾನಕ್ಕೆ ಬೆಲೆ ಸಿಗುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಕಹಿ ಘಟನೆಗಳು ಮರುಕಳಿಸದಂತೆ ಶಾಸಕರು ಎಚ್ಚರಿಕೆ ವಹಿಸಬೇಕು ಮತ್ತು ಸದನದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಸ್ಪೀಕರ್ ಯು.ಟಿ. ಖಾದರ್ ಕರೆ ನೀಡಿದ್ದಾರೆ.




