ದೇಶ/ವಿದೇಶರಾಜಕೀಯರಾಜ್ಯಸುದ್ದಿ

ಮೆಟ್ರೋ ದರ ಏರಿಕೆ; ಸಿದ್ದರಾಮಯ್ಯ ಸರ್ಕಾರಕ್ಕೆ ಹೆಚ್‌ಡಿಕೆ ಟಾಂಗ್..!?

ಬೆಂಗಳೂರು: ಮೆಟ್ರೋ ದರ ಏರಿಕೆ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

ರಾಜ್ಯ ಸರ್ಕಾರವು ಮೆಟ್ರೋ ದರವನ್ನು ಶೇ. 5 ರಷ್ಟು ಏರಿಕೆ ಮಾಡಲು ಮುಂದಾಗಿರುವುದನ್ನು ಪ್ರಶ್ನಿಸಿರುವ ಕುಮಾರಸ್ವಾಮಿ, “ಯಾವುದೇ ದರ ಏರಿಕೆ ಮಾಡಿದರೂ ಜನರು ಸಂತೋಷದಿಂದ ನೀಡುತ್ತಾರೆ ಎನ್ನುವುದು ಮುಖ್ಯಮಂತ್ರಿಗಳ ಭ್ರಮೆ” ಎಂದು ಕಿಡಿಕಾರಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಶಕ್ತಿ ತುಂಬಿದ್ದೇವೆ ಎಂದು ಜಾಹೀರಾತು ನೀಡುತ್ತಿರುವ ಸರ್ಕಾರ, ಅದೇ ನೆಪದಲ್ಲಿ ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೊರಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಮೆಟ್ರೋ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ಕೇವಲ 20% ಮಾತ್ರ ಎಂದು ರಾಜ್ಯ ಸರ್ಕಾರ ಹೇಳಿಕೊಳ್ಳುತ್ತಿದೆ. ಹಾಗಿದ್ದಲ್ಲಿ, ಹೆಚ್ಚಿನ ಪಾಲು ಹೊಂದಿರುವ ರಾಜ್ಯ ಸರ್ಕಾರಕ್ಕೆ ದರ ನಿಗದಿಪಡಿಸುವ ಸಂಪೂರ್ಣ ಅಧಿಕಾರ ಇರುತ್ತದೆ. ಹೀಗಿರುವಾಗ ದರ ಏರಿಕೆಯ ಜವಾಬ್ದಾರಿಯನ್ನು ಕೇಂದ್ರದ ಮೇಲೆ ಹೊರಿಸುವುದು ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಮೆಟ್ರೋ ದರ ಏರಿಕೆಯಾಗದಿದ್ದರೂ ಕರ್ನಾಟಕದಲ್ಲಿ ಮಾತ್ರ ಯಾಕೆ ದರ ಏರಿಕೆ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿಗಳ ತಪ್ಪು ನಿರ್ಧಾರಗಳು ಮತ್ತು ಜನವಿರೋಧಿ ನೀತಿಗಳನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ದೂಷಣೆ ಮಾಡುವ ಚಾಳಿ ಮುಂದುವರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ಈ ವಿಚಾರದಲ್ಲಿ ಜನರೇ ಎಚ್ಚೆತ್ತುಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದಾರೆ.

Comments (0)

Your email address will not be published. Required fields are marked *

Back to top button