ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ರಾಜ್ಯಸಭೆಯಲ್ಲಿ ತೀವ್ರ ರಾಜಕೀಯ ಹೈಡ್ರಾಮಾ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸದನವನ್ನು ಉದ್ದೇಶಿಸಿ ಮಾತನಾಡಲು ಆರಂಭಿಸುತ್ತಿದ್ದಂತೆ, ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ಭಾಷಣದ ನಡುವೆಯೇ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸದಸ್ಯರು ಗದ್ದಲ ಎಬ್ಬಿಸಿ, ಬಳಿಕ ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಿದರು.ಈ ಕೋಲಾಹಲಕ್ಕೆ ಮುಖ್ಯ ಕಾರಣ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಮಾತನಾಡಲು ಅವಕಾಶ ನಿರಾಕರಿಸಿದ್ದು. ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಅಪ್ರಕಟಿತ ಪುಸ್ತಕದ ಅಂಶಗಳನ್ನು ಉಲ್ಲೇಖಿಸಲು ರಾಹುಲ್ ಗಾಂಧಿಯವರಿಗೆ ಸ್ಪೀಕರ್ ಅನುಮತಿ ನೀಡಿರಲಿಲ್ಲ. ಇದನ್ನು ವಿರೋಧಿಸಿದ ಇಂಡಿಯಾ ಮೈತ್ರಿಕೂಟದ ಸದಸ್ಯರು, ರಾಜ್ಯಸಭೆಯಲ್ಲಿ ಪ್ರಧಾನಿ ಉತ್ತರಿಸುವಾಗ “ಲೋಕಸಭಾ ವಿಪಕ್ಷ ನಾಯಕ ಮಾತನಾಡಲಿ” ಎಂಬ ಘೋಷಣೆಗಳನ್ನು ಕೂಗುತ್ತಾ ಸದನದಿಂದ ಹೊರನಡೆದರು.
ವಿರೋಧ ಪಕ್ಷಗಳ ಗೈರುಹಾಜರಿಯ ನಡುವೆಯೂ ಪ್ರಧಾನಿ ಮೋದಿ ತಮ್ಮ ಭಾಷಣವನ್ನು ಮುಂದುವರಿಸಿದರು. ಇತ್ತ ಸಂಸತ್ ಭವನದ ಮೆಟ್ಟಿಲುಗಳ ಮೇಲೆ ಕುಳಿತ ಕಾಂಗ್ರೆಸ್ ಸಂಸದರು ಸರ್ಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿರೋಧ ಪಕ್ಷದ ನಾಯಕರ ಧ್ವನಿಯನ್ನು ಅಡಗಿಸಲಾಗುತ್ತಿದೆ ಎಂದು ಖರ್ಗೆ ಈ ಸಂದರ್ಭದಲ್ಲಿ ಆರೋಪಿಸಿದರು. ಪ್ರಧಾನಿ ಭಾಷಣ ಮತ್ತು ವಿರೋಧ ಪಕ್ಷಗಳ ಸಭಾತ್ಯಾಗದಿಂದಾಗಿ ರಾಜ್ಯಸಭೆಯಲ್ಲಿ ಅಕ್ಷರಶಃ ಸಮರ ಸದೃಶ ವಾತಾವರಣ ನಿರ್ಮಾಣವಾಗಿತ್ತು.


