Top Newsಜಿಲ್ಲೆರಾಜ್ಯಸುದ್ದಿಹಣಕಾಸು

ಮೈಸೂರಲ್ಲಿ ಲೋಕಾಯುಕ್ತ ಶಾಕ್; ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಪೊಲೀಸರು!

ಮೈಸೂರು: ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಪ್ರಭಾವಿ ಅಧಿಕಾರಿಗಳಿಗೆ ಸೇರಿದ ಒಟ್ಟು ಏಳು ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಕಚೇರಿ ಮತ್ತು ನಿವಾಸಗಳಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲೋಕಾಯುಕ್ತ ಬಲೆಯಲ್ಲಿ ಸಿಲುಕಿದ ಮೊದಲ ಅಧಿಕಾರಿ ಮೈಸೂರು ಮಹಾನಗರ ಪಾಲಿಕೆಯ ಹಾಗೂ ಟಿ. ನರಸೀಪುರ ಪುರಸಭೆಯ ಜೂನಿಯರ್ ಇಂಜಿನಿಯರ್ ಕೆ.ಆರ್. ಚಂದ್ರಶೇಖರ್. ಚಂದ್ರಶೇಖರ್‌ಗೆ ಸಂಬಂಧಿಸಿದ ವಿಜಯನಗರದ ಐಷಾರಾಮಿ ನಿವಾಸ, ಕೆ.ಜಿ. ಕೊಪ್ಪಲು ನಿವಾಸ ಹಾಗೂ ಟಿ. ನರಸೀಪುರ ಕಚೇರಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ಅಧಿಕಾರಿಗಳು ಜಾಲಾಡಿದ್ದಾರೆ. ಶೋಧದ ವೇಳೆ ಬರೋಬ್ಬರಿ 60 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದ್ದು, ಅಧಿಕಾರಿಗಳನ್ನು ದಂಗಾಗಿಸಿದೆ.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಇಲಾಖೆಯ ಡೆಪ್ಯುಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಅಲ್ತಾಫ್ ಹುಸೇನ್ ಜಕಾರ್ತಿ ಮನೆ ಮತ್ತು ಕಚೇರಿಯ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಜಕಾರ್ತಿಗೆ ಸೇರಿದ ಎರಡು ನಿವಾಸಗಳು ಹಾಗೂ ಕಚೇರಿಗಳಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದ್ದು, ಆಸ್ತಿಪಾಸ್ತಿಗೆ ಸಂಬಂಧಿಸಿದ ಪ್ರಮುಖ ದಸ್ತಾವೇಜುಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳ್ಳಂಬೆಳಿಗ್ಗೆ ನಡೆದ ಈ ಕಾರ್ಯಾಚರಣೆಯು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಸುವ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ.

Comments (0)

Your email address will not be published. Required fields are marked *

Back to top button