ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ 49ನೇ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-2 ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್, ಈ ಬಾರಿ ತಮ್ಮ ಜನ್ಮದಿನವನ್ನು ಕಂಬಿ ಹಿಂದೆಯೇ ಕಳೆಯುವುದು ಅನಿವಾರ್ಯವಾಗಿದೆ. ಪ್ರತಿ ವರ್ಷ ಫೆಬ್ರವರಿ 16ಕ್ಕೆ ಆರ್.ಆರ್. ನಗರದಲ್ಲಿರುವ ಅವರ ನಿವಾಸದ ಮುಂದೆ ನಡೆಯುತ್ತಿದ್ದ ‘ಡಿ ಉತ್ಸವ’ದ ಅದ್ದೂರಿ ಕಳೆ ಈ ಬಾರಿ ಜೈಲಿನ ಗೋಡೆಗಳ ಮಧ್ಯೆ ಮರೆಯಾಗಿದೆ.
ದರ್ಶನ್ ಹೊರಗಿದ್ದರೆ ಹಬ್ಬದಂತೆ ಸಂಭ್ರಮಿಸುತ್ತಿದ್ದ ಅಭಿಮಾನಿಗಳು, ಈ ಬಾರಿ ತಮ್ಮ ನೆಚ್ಚಿನ ನಟನ ಅನಿವಾರ್ಯ ಗೈರುಹಾಜರಿಯ ನಡುವೆಯೂ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. ರಾಜ್ಯದ ವಿವಿಧೆಡೆ ರಕ್ತದಾನ ಶಿಬಿರ, ಅನ್ನದಾನ ಹಾಗೂ ಅನಾಥಾಶ್ರಮಗಳಿಗೆ ಸಹಾಯ ಮಾಡುವ ಮೂಲಕ ‘ಡಿ ಉತ್ಸವ’ವನ್ನು ಮಾನವೀಯತೆಯ ದೃಷ್ಟಿಯಿಂದ ಆಚರಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ. ನೆಚ್ಚಿನ ನಟ ಸಿಗದಿದ್ದರೂ ಅವರ ಹೆಸರಿನಲ್ಲಿ ಸತ್ಕಾರ್ಯಗಳನ್ನು ಮಾಡಲು ಅಭಿಮಾನಿ ಸಂಘಗಳು ಮುಂದಾಗಿವೆ.
ಕಂಬಿ ಹಿಂದೆ ದರ್ಶನ್ ಹುಟ್ಟುಹಬ್ಬ; ಅಬ್ಬರವಿಲ್ಲದೆ ಸಮಾಜಮುಖಿ ಕಾರ್ಯಕ್ಕೆ ಮುಂದಾದ ಫ್ಯಾನ್ಸ್
ದರ್ಶನ್ ಅವರ ನಿವಾಸವಿರುವ ಆರ್.ಆರ್. ನಗರದ ನಿವಾಸಿಗಳು ಈ ಬಾರಿ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರತಿ ವರ್ಷ ಸಾವಿರಾರು ಅಭಿಮಾನಿಗಳ ಅರಚಾಟ, ಪಟಾಕಿಗಳ ಅಬ್ಬರ ಮತ್ತು ಸಂಚಾರ ದಟ್ಟಣೆಯಿಂದ ಸ್ಥಳೀಯರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದರು. ಅದರಲ್ಲೂ ಹಿರಿಯ ಸಾಹಿತಿ ನಾಡೋಜ ಗೋ.ರು. ಚೆನ್ನಬಸಪ್ಪ ಅವರು ದರ್ಶನ್ ಅಭಿಮಾನಿಗಳ ಪಟಾಕಿ ಸದ್ದಿನಿಂದ ತಮ್ಮ ಕಿವಿ ಕೇಳಿಸದಂತಾದ ಕಹಿ ಘಟನೆಯನ್ನು ಈ ಹಿಂದೆ ಹಂಚಿಕೊಂಡಿದ್ದರು. ಈ ವರ್ಷ ಅಂತಹ ಯಾವುದೇ ಗದ್ದಲವಿಲ್ಲದ ಕಾರಣ ನೆರೆಹೊರೆಯವರು ನೆಮ್ಮದಿಯ ಭಾವದಲ್ಲಿದ್ದಾರೆ.
ದರ್ಶನ್ ಅವರು ಈವರೆಗೂ ಜಾಮೀನು ಅರ್ಜಿ ಸಲ್ಲಿಸದ ಕಾರಣ ಹಾಗೂ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ, ಈ ಹುಟ್ಟುಹಬ್ಬದಂದು ದಾಸನ ದರ್ಶನ ಅಭಿಮಾನಿಗಳಿಗೆ ಸಿಗುವುದು ಅನುಮಾನ. ಆದರೂ, ನಮ್ಮ ಬಾಸ್ ಇಲ್ಲದಿದ್ದರೇನಂತೆ, ಅವರ ಹೆಸರಲ್ಲಿ ಹತ್ತು ಜನಕ್ಕೆ ಒಳ್ಳೆ ಕೆಲಸ ಮಾಡೋಣ ಎಂಬ ನಿಲುವಿಗೆ ಅಸಲಿ ಅಭಿಮಾನಿಗಳು ಬಂದಿದ್ದಾರೆ.


