ಬಿಗ್ ಬಾಸ್ ಖ್ಯಾತಿಯ ನಟ ರಜತ್ ಕಿಶನ್ ಅವರಿಗೆ ಮತ್ತೊಮ್ಮೆ ಕಾನೂನು ಸಂಕಷ್ಟ ಎದುರಾಗಿದೆ. ಈ ಹಿಂದೆ ಮಚ್ಚು ಹಿಡಿದು ರೀಲ್ಸ್ ಮಾಡಿ ವಿವಾದಕ್ಕೀಡಾಗಿದ್ದ ರಜತ್, ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಸಿಗರೇಟ್ ಸೇದಿ ಫೋಟೋಶೂಟ್ ಮಾಡುವ ಮೂಲಕ ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಈ ವರ್ತನೆಯನ್ನು ಖಂಡಿಸಿ ‘ಕರ್ನಾಟಕ ಸೇನಾ ಪಡೆ’ ಕಾರ್ಯಕರ್ತರು ನಟನ ವಿರುದ್ಧ ದೂರು ದಾಖಲಿಸಿದ್ದಾರೆ.ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಅತ್ಯಂತ ಗೌರವಾನ್ವಿತ ಪಾರಂಪರಿಕ ಕಟ್ಟಡವಾಗಿದೆ. ಅಂತಹ ಐತಿಹಾಸಿಕ ತಾಣದ ಮುಂದೆ ನಿಂತು ರಜತ್ ಸಾರ್ವಜನಿಕವಾಗಿ ಸಿಗರೇಟ್ ಸೇದುತ್ತಾ ರೀಲ್ಸ್ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೆಲೆಬ್ರಿಟಿ ಎನಿಸಿಕೊಂಡವರು ಸಮಾಜಕ್ಕೆ ಮಾದರಿಯಾಗಿರಬೇಕು, ಆದರೆ ಸಿಗರೇಟ್ ಸೇದುತ್ತಾ ಹೀರೋಯಿಸಂ ಪ್ರದರ್ಶಿಸುವುದು ಯುವ ಜನತೆಗೆ ತಪ್ಪು ಸಂದೇಶ ನೀಡುತ್ತದೆ ಎಂದು ಸಂಘಟನೆಯ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬದ್ಧವಾಗಿ ಅಪರಾಧವಾಗಿದ್ದರೂ, ರಜತ್ ಅವರು ನಿರ್ಭಯವಾಗಿ ಈ ಕೃತ್ಯ ಎಸಗಿದ್ದಾರೆ. ಇಂತಹ ವಿವಾದಾತ್ಮಕ ಫೋಟೋಶೂಟ್ ಮಾಡಲು ಅವರಿಗೆ ಅನುಮತಿ ನೀಡಿದವರು ಯಾರು ಎಂಬ ಪ್ರಶ್ನೆಯೂ ಕೇಳಿಬಂದಿದೆ. ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪಾರಂಪರಿಕ ಕಟ್ಟಡದ ಘನತೆಗೆ ಧಕ್ಕೆ ತಂದಿರುವ ನಟನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಸೇನಾ ಪಡೆ ಆಗ್ರಹಿಸಿದೆ.


