#Exclusive NewsTop Newsಜಿಲ್ಲೆರಾಜಕೀಯರಾಜ್ಯಸುದ್ದಿ

ಹೆಚ್‌ಡಿಕೆ-ಅಶ್ವಿನಿ ವೈಷ್ಣವ್ ರೈಲ್ವೆ ಮಿಷನ್; ರೈಲ್ವೆ ಬೇಡಿಕೆಗಳಿಗೆ ಗ್ರೀನ್ ಸಿಗ್ನಲ್!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸಂಸತ್ ಭವನದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಬೆಂಗಳೂರು-ಮಂಡ್ಯ-ಮೈಸೂರು ಮಾರ್ಗದ ಹಲವು ದಶಕಗಳ ರೈಲ್ವೆ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು. ಈ ವೇಳೆ ಹಳೆ ಮೈಸೂರು ಭಾಗದ ರೈಲ್ವೆ ಮೂಲಸೌಕರ್ಯ ವೃದ್ಧಿ ಮತ್ತು ಹೊಸ ರೈಲುಗಳ ಮಂಜೂರಾತಿ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಕುಮಾರಸ್ವಾಮಿ ಅವರ ಪ್ರಸ್ತಾವನೆಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ತ್ವರಿತ ಕ್ರಮದ ಭರವಸೆ ನೀಡಿದ್ದಾರೆ.

ಈ ಭೇಟಿಯ ಪ್ರಮುಖ ಉದ್ದೇಶ ಬೆಂಗಳೂರು-ಮೈಸೂರು ನಡುವಿನ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ಮಂಡ್ಯ ಜಿಲ್ಲೆಯ ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವುದಾಗಿತ್ತು. ಮುಖ್ಯವಾಗಿ ಬೆಂಗಳೂರು-ಮಂಗಳೂರು-ಮುರುಡೇಶ್ವರ ರೈಲು ಮದ್ದೂರು ಮತ್ತು ಮಂಡ್ಯದಲ್ಲಿ ನಿಲುಗಡೆ ನೀಡಬೇಕು ಹಾಗೂ ಮದ್ದೂರು ನಿಲ್ದಾಣವನ್ನು ಆಧುನೀಕರಿಸಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವರು ಒತ್ತಾಯಿಸಿದರು. ಅಲ್ಲದೆ, ರೈತರ ಹಿತದೃಷ್ಟಿಯಿಂದ ವಿ.ಸಿ. ಫಾರ್ಮ್ ಗೇಟ್ ಮತ್ತು ದೊಡ್ಡಬ್ಯಾಡರಹಳ್ಳಿಯಲ್ಲಿ ರೈಲ್ವೆ ಓವರ್‌ಬ್ರಿಡ್ಜ್ ನಿರ್ಮಾಣದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು.

ವಾಣಿಜ್ಯ ಮತ್ತು ಕೃಷಿ ಚಟುವಟಿಕೆಗಳಿಗೆ ವೇಗ ನೀಡಲು ಪಾಂಡವಪುರದಲ್ಲಿ ಗೂಡ್ಸ್ ಯಾರ್ಡ್ ಸ್ಥಾಪನೆ ಮತ್ತು ಹೆಜ್ಜಾಲ-ಚಾಮರಾಜನಗರ ಹೊಸ ರೈಲು ಮಾರ್ಗಕ್ಕೆ ಮಂಜೂರಾತಿ ನೀಡುವಂತೆ ಕೋರಿದರು. ಇದರೊಂದಿಗೆ ಚಾಮುಂಡಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳ ಸಂಖ್ಯೆ ಹೆಚ್ಚಳ, ಚನ್ನಪಟ್ಟಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಮತ್ತು ಮಂಗಳೂರು-ಹಾಸನ ಮಾರ್ಗವಾಗಿ ಮುಂಬೈ-ಬೆಂಗಳೂರು ನಡುವೆ ಹೊಸ ರೈಲು ಸಂಚಾರ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಿದರು.

ಕೊಪ್ಪಳ ಜಿಲ್ಲೆಯ ಹೊಸ ಬ್ರಾಡ್‌ಗೇಜ್ ಮಾರ್ಗಗಳಿಗೆ ಅನುದಾನ, ಸಕಲೇಶಪುರ ನಿಲ್ದಾಣದ ಅಭಿವೃದ್ಧಿ ಹಾಗೂ ಹೊಸಕೋಟೆಯ ತಿಂಡ್ಲು ಬಳಿ ಮ್ಯಾಜಿಕ್ ಬಾಕ್ಸ್ ಅಳವಡಿಕೆ ಸೇರಿದಂತೆ ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

Comments (0)

Your email address will not be published. Required fields are marked *

Back to top button