
ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬದಲಿಗೆ ಮಸೂದೆಯನ್ನು ಪರಿಚಯಿಸಿದೆ. ದಿ ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಎಂಬುದಾಗಿ ಮರುನಾಮಕರಣ ಮಾಡಿದ್ದು ಈ ಚಳಿಗಾಲದ ಅಧಿವೇಶನದಲ್ಲೇ ಮಸೂದೆ ಮಂಡನೆ ಮಾಡಲಿದೆ.
ಕೇಂದ್ರ ಸರ್ಕಾರದ ಪ್ರಕಾರ, ಈ ಹೊಸ ಮಸೂದೆಯು ವಿಕಸಿತ ಭಾರತ 2047 ಯೋಜನೆಗೆ ಹೊಸ ಚೌಕಟ್ಟು ಒದಗಿಸಲಿದೆ. ಎಂಜಿನರೇಗಾ ಯೋಜನೆಯನ್ನು 2005ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಇದು ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಕೆಲಸವನ್ನು ಖಾತರಿಪಡಿಸುತ್ತದೆ.
ಹೊಸ ಮಸೂದೆಯಲ್ಲಿ 100 ದಿನಗಳ ಖಾತರಿಯನ್ನು 125 ಕ್ಕೆ ಹೆಚ್ಚಿಸಲಾಗಿದೆ. ಕೆಲಸ ಪೂರ್ಣಗೊಂಡ ಒಂದು ವಾರ ಅಥವಾ 15 ದಿನಗಳಲ್ಲಿ ಪಾವತಿಗಳನ್ನು ಮಾಡಲಾಗುತ್ತದೆ ಎಂಬ ಪ್ರಸ್ತಾಪವಿದೆ. ಗಡುವಿನೊಳಗೆ ಪಾವತಿಗಳನ್ನು ಮಾಡದಿದ್ದರೆ, ನಿರುದ್ಯೋಗ ಭತ್ಯೆಗೆ ಅವಕಾಶವೂ ಇದೆ. ಹೊಸ ಮಸೂದೆಯು ಯೋಜನೆಯಡಿಯಲ್ಲಿ ಕೆಲಸವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸುತ್ತದೆ – ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮೂಲಸೌಕರ್ಯ ಮತ್ತು ವಿಪತ್ತು ಎಂದು ವಿಂಗಡಿಸಲಾಗಿದೆ.
ಗ್ರಾಮೀಣ ಪ್ರದೇಶದ ನಿವಾಸಿಗಳು ಕೃಷಿ ಋತುವಿನಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಬಯೋಮೆಟ್ರಿಕ್ಸ್ ಮತ್ತು ಜಿಯೋಟ್ಯಾಗಿಂಗ್ ಅನ್ನು ಬಳಸಲಾಗುತ್ತದೆ. ಜಿ ರಾಮ್ ಜಿ ಯೋಜನೆಯಡಿಯಲ್ಲಿ, ಕೇಂದ್ರ ಮತ್ತು ಹೆಚ್ಚಿನ ರಾಜ್ಯಗಳು 60:40 ಅನುಪಾತದಲ್ಲಿ ವೆಚ್ಚಗಳನ್ನು ಹಂಚಿಕೊಳ್ಳುತ್ತವೆ. ಈ ಅನುಪಾತವು ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ 90:10 ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100 ಪ್ರತಿಶತ ಇರುತ್ತದೆ. ವಾರ್ಷಿಕವಾಗಿ 1.51 ಲಕ್ಷ ಕೋಟಿ ರೂ.ಗಳ ಪ್ರಸ್ತಾವಿತ ವೆಚ್ಚದಲ್ಲಿ ಕೇಂದ್ರವು 95,692 ಕೋಟಿ ರೂ.ಗಳನ್ನು ಒದಗಿಸುತ್ತದೆ.




