
ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್ ಬಳಿ ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ..
ಹಾಸನಾಂಬ ದೇವಿಯ ದರ್ಶನ ಪಡೆದು ವಾಪಸ್ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ನೇಹಿತ ಬಸವರಾಜು ಜೊತೆಯಲ್ಲಿ ಬೆಂಗಳೂರಿನಿಂದ ಯಮಹಾ ಬೈಕ್‌ನಲ್ಲಿ 19 ವರ್ಷದ ಅನು ಹಾಗೂ 20 ವರ್ಷದ ಛಾಯಾ ಬಂದಿದ್ದರು. ಹಾಸನಾಂಬ ದೇವಿ ದರ್ಶನ ಮುಗಿಸಿ ಒಂದೇ ಬೈಕ್‌ನಲ್ಲಿ ಮೂವರು ತೆರಳುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಹೌಸಿಂಗ್ ಬೋರ್ಡ್ ಬಳಿ ವೇಗವಾಗಿ ಬಂದು ಮೊದಲು ಆಕ್ಟಿವಾಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿದೆ.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ಬಸವರಾಜು ಹಾಗೂ ಅನುಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೋರ್ವ ಯುವತಿ ಛಾಯಾ ಸ್ಥಿತಿ ಚಿಂತಾಜನಕವಾಗಿದ್ದು, ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಅಪಘಾತದಲ್ಲಿ ಆಕ್ಟಿವಾ ಸವಾರ ಮೊಹಮ್ಮದ್ ಶಾಹಿದ್‌ಗೂ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




